ಸದಾ ಒಂದಲ್ಲಾ ಒಂದು ಕಾರಣಗಳಿಗಾಗಿ ವಿವಾದಕ್ಕೆ ಗುರಿಯಾಗುತ್ತಿರುವ ಸ್ಯಾಂಡಲ್ ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಮೈಸೂರಿನ ತಮ್ಮ ಫಾರಂ ಹೌಸ್ನಲ್ಲಿದ್ದ ನಟ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವರ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.
ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬವರು ಸ್ಯಾಂಡಲ್ ವುಡ್ ನಟಿ ಪವಿತ್ರ ಗೌಡ ಅವರಿಗೆ ಹಲವು ಅಶ್ಲೀಲ ಮೆಸೇಜುಗಳನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.
ಪವಿತ್ರಗೌಡ ಅವರಿಗೆ ಈ ರೀತಿಯ ಮೆಸೇಜುಗಳನ್ನು ಕಳುಹಿಸಿದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರು ಕೇಳದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಈ ಕೊಲೆ ಪ್ರಕರಣದ ಬೆನ್ನು ಹತ್ತಿದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಾಲ್ವರು ಹಂತಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಹಂತಕರು ನಟ ದರ್ಶನ್ ಅವರ ಸೂಚನೆಯ ಮೇರೆಗೆ ಈ ಕೊಲೆ ಮಾಡಲಾಗಿದೆ. ಹತ್ಯೆ ನಡೆದ ಸಮಯದಲ್ಲಿ ಆ ಸ್ಥಳದಲ್ಲಿ ನಟ ದರ್ಶನ್ ಕೂಡ ಹಾಜರಿದ್ದರು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದಾರೆ.
ನಟ ದರ್ಶನ್ ಅವರು ಸ್ಯಾಂಡಲ್ ವುಡ್ ನ ನಟಿ ಪವಿತ್ರ ಗೌಡ ಅವರೊಂದಿಗೆ ಅತ್ಯಂತ ಆತ್ಮೀಯರಾಗಿದ್ದಾರೆ. ಇತ್ತೀಚೆಗೆ ನಟಿ ಪವಿತ್ರಾ ಗೌಡ ಅವರು ದರ್ಶನ್ ಅವರೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು.
ನಟಿ ಪವಿತ್ರಗೌಡ ಕೂಡ ಬಂಧನ
ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಅವರ ಗೆಳತಿ ನಟಿ ಪವಿತ್ರಗೌಡರನ್ನು ಬಂಧಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಗೌಡರ ಪಾತ್ರವಿರುವುದು ತನಿಖೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿದೆ. ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಇನ್ಸ್ಟಾಗ್ರಾಮ್ನಲ್ಲಿ ಪವಿತ್ರಗೌಡರಿಗೆ ಅಶ್ಲೀಲವಾದ ಕಾಮೆಂಟ್ ಮತ್ತು ಮೇಸೆಜ್ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಪವಿತ್ರಗೌಡ ದರ್ಶನ್ ಗೆ ಮಾಹಿತಿ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ದರ್ಶನ್ ತನ್ನ ಹುಡುಗರಿಗೆ ಸೂಚನೆ ನೀಡಿದ್ದು,ಅದರಂತೆ ಆತನನ್ನು ಕರೆ ತಂದು ಹಲ್ಲೆ ಮಾಡಿದ ಬಳಿಕ, ಕೊಲೆ ಮಾಡಿ ಕಾಮಾಕ್ಷಿಪಾಳ್ಯದ ಬಳಿಯ ಮೋರಿ ಶವ ಎಸೆದು ಪರಾರಿಯಾಗಿದ್ದರು.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ವೇಳೆಯಲ್ಲಿ ದರ್ಶನ್ ಮತ್ತು ಪವಿತ್ರಗೌಡ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪವಿತ್ರಗೌಡರನ್ನು ಬಂಧಿಸಲಾಗಿದೆ.