ತಮ್ಮ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ನಟ ಸ್ಟಾರ್ ದರ್ಶನ್‌ಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ.
ರೇಣುಕಾಸ್ವಾಮಿ ಎಂಬುವರನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆಯುವ ವೇಳೆ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಅಲ್ಲಿಯೇ ಇದ್ದರು ಎನ್ನಲಾಗಿತ್ತು.
ದೊರೆತ ಸಾಕ್ಷಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ನಟ ದರ್ಶನ್ ಹಾಗೂ ಆತನ ಸಹಚರರು ಮತ್ತು ಗೆಳತಿ ಪವಿತ್ರಾ ಗೌಡ ಅವರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಪವಿತ್ರ ಗೌಡ ಅವರನ್ನು ಎ1 ಅಪರಾಧಿ ಎಂದು ಹೆಸರಿಸಲಾಗಿತ್ತು.
ಇದೀಗ ಈ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಹಂತದಲ್ಲಿದೆ ಈ ವೇಳೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧವೇ ಹೆಚ್ಚಿನ ಸಾಕ್ಷಿಗಳು ಇವೆ ಎಂದು ಹೇಳಲಾಗುತ್ತಿದೆ.
ನಾಪತ್ತೆಯಾಗಿದ್ದ ರೇಣುಕಾಸ್ವಾಮಿ ಅವರ ಮೊಬೈಲ್ ಮತ್ತು ದರ್ಶನ್ ಹಾಗೂ ಇತರ ಮೊಬೈಲ್‌ಗಳನ್ನು ಪತ್ತೆ ಹಚ್ಚಿ, ಆಕ್ಟಿವೇಟ್ ಮಾಡಿದ ಪೊಲೀಸರು ಅದರಲ್ಲಿನ ಮಾಹಿತಿಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು ಬಹುತೇಕ ಮಾಹಿತಿ ದರ್ಶನ್ ವಿರುದ್ಧವೇ ಇದೆ ಎನ್ನಲಾಗಿದೆ.
ಹೀಗಾಗಿ ನಟ ದರ್ಶನ್ ಅವರನ್ನು ಪ್ರಕರಣದಲ್ಲಿ ಎ1 ಆರೋಪಿ ಎಂದು ನಮೂದಿಸುವ ಸಾಧ್ಯತೆ ಇದೆ. ಹೀಗೆ ಏನಾದರೂ ಆದರೆ ನಟ ದರ್ಶನ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ಜಾಮೀನು ಮತ್ತಿತರ ಪ್ರಕ್ರಿಯೆಗಳು ವಿಳಂಬವಾಗಲಿವೆ.