ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಳ್ಳಾರಿ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುದೀರ್ಘವಾಗಿ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಗುರುವಾರ ಮುಕ್ತಾಯಗೊಳಿಸಿತ್ತು. ಇಂದು (ಅ.14) ವಿಚಾರಣೆಗೆ ಎತ್ತಿಕೊಂಡು ತೀರ್ಪು ಪ್ರಕಟಿಸಿದೆ.
ನಟ ದರ್ಶನ್ ಜೊತೆಗೆ ಎ1 ಆರೋಪಿ ನಟಿ ಪವಿತ್ರಾ ಗೌಡ ಅವರ ಅರ್ಜಿ ಕೂಡ ವಜಾಗೊಂಡಿದೆ. ಇದೇ ಪ್ರಕರಣದ ಆರೋಪಿ ಎ8 ರವಿಶಂಕರ್‌ಗೆ 57ನೇ ಸಿಸಿಎಚ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.
ದರ್ಶನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದ್ದರು. ದರ್ಶನ್ ಸೇರಿ ನಾಲ್ವರಿಗೆ ಜಾಮೀನು ಮಂಜೂರು ಮಾಡದಂತೆ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಿದ್ದರು. ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.