ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ-ಕಾಂಗ್ರೆಸ್ ನಡುವೆ ಸಂಘರ್ಷಕ್ಕೆ ಕಾರಣವಾಗಬಲ್ಲ ಇನ್ನೊಂದು ಮಸೂದೆಯನ್ನು ಮೋದಿ ಸರ್ಕಾರ ಸಿದ್ದಪಡಿಸಿದೆ.
ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ) ಯೋಜನೆ ಹೆಸರು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ ಯೋಜನೆ’ ಎಂದು ಮರುನಾಮಕರಣಕ್ಕೆ ನಿರ್ಧರಿಸಿತ್ತು. ಇದೀಗ ಯೋಜನೆಯ ಕಾಯ್ದೆಯ ಹೆಸರಲ್ಲಿ ಗಾಂಧೀಜಿ ಹೆಸರಿಗೆ ಕೊಕ್ ನೀಡಿ ‘ದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಷನ್-ಗ್ರಾಮೀಣ-2025’ (ವಿಬಿ ಜಿ ರಾಮ್ ಜಿ – VB G RAM G) ಎಂಬ ಮಸೂದೆ ಮಂಡನೆಗೆ ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಎಂಜಿ-ನರೇಗಾ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಇದರಲ್ಲಿ ಕೌಶಲ್ಯರಹಿತ ಕಾರ್ಮಿಕರ ಶೇ.100ರಷ್ಟು ವೇತನವನ್ನು ಕೇಂದ್ರವೇ ಭರಿಸುತ್ತಿತ್ತು. ಕೌಶಲ್ಯಪೂರ್ಣ ಕಾರ್ಮಿಕರ ನೇಮಕ ಹಾಗೂ ಇತರ ಕೆಲವು ಖರ್ಚು ವೆಚ್ಚಗಳಲ್ಲಿ- ರಾಜ್ಯ ಸರ್ಕಾರಗಳು ವೆಚ್ಚದ 1 ಸಣ್ಣ ಭಾಗವನ್ನು ಭರಿಸುತ್ತಿದ್ದವು.
ಆದರೆ ‘ಜಿ ರಾಮ್ ಜಿ’ ಯೋಜನೆಯಡಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳಬೇಕಾಗಿ ಬರಲಿದೆ. ಈ ಅನುಪಾತವು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ 90:10 (ಶೇ.90 ಕೇಂದ್ರ, ಶೇ.10 ರಾಜ್ಯ) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.100 (ಅರ್ಥಾತ್ ಕೇಂದ್ರ ಸರ್ಕಾರ ಶೇ.100) ಇರುತ್ತದೆ. ವಾರ್ಷಿಕವಾಗಿ 1.51 ಲಕ್ಷ ಕೋಟಿ ರು. ಪ್ರಸ್ತಾವಿತ ವೆಚ್ಚದಲ್ಲಿ, ಕೇಂದ್ರವು 95,692 ಕೋಟಿ ರು. ಭರಿಸುತ್ತದೆ.
ಉದ್ಯೋಗ ಖಾತ್ರಿ ಯೋಜನಾ ವೆಚ್ಚದಲ್ಲಿನ ಕೇಂದ್ರದ ಪಾಲು ಕಡಿತ ಹಾಗೂ ರಾಜ್ಯದ ಪಾಲು ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿವೆ. ಈಗಾಗಲೇ ತೆರಿಗೆಯಲ್ಲಿನ ರಾಜ್ಯಗಳ ಪಾಲು ಕಡಿತ ಮಾಡಲಾಗಿದೆ. ಇದೀಗ ಖಾತ್ರಿ ಯೋಜನೆಯಲ್ಲಿನ ಕೇಂದ್ರೀಯ ಪಾಲು ಕಮ್ಮಿ ಮಾಡಿ ರಾಜ್ಯಗಳಿಗೆ ಹೊರೆ ವರ್ಗಾಯಿಸಲಾಗುತ್ತಿದೆ. ಯೋಜನೆಯ ಚೌಕಟ್ಟಿಗೇ ಭಂಗ ತರುವಂತಾಗಿದೆ.
ಗಾಂಧಿ ಹೆಸರಿಗೆ ಕೊಕ್ ಏಕೆ?
ಮಹಾತ್ಮ ಗಾಂಧಿಯವರ ಹೆಸರನ್ನು ಅವರು ಏಕೆ ತೆಗೆದುಹಾಕುತ್ತಿದ್ದಾರೆ? ಅವರನ್ನು ಭಾರತದ ಅತಿದೊಡ್ಡ ನಾಯಕ ಎಂದು ಪರಿಗಣಿಸಲಾಗುತ್ತದೆ. ಯೋಜನೆಗಳ ಹೆಸರು ಬದಲಾದಾಗಲೆಲ್ಲಾ, ಕಡತಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಹಾಗೂ ಅಪಾರ ಖರ್ಚು ಆಗುತ್ತದೆ. ಇದು ಜನರ ಹಣ ಪೋಲಾಗುವುದಲ್ಲದೇ ಮತ್ತೇನು ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮಸೂದೆಯಲ್ಲಿ ಏನಿದೆ?
2005ರಲ್ಲಿ ಅಂದಿನ ಯುಪಿಎ ಸರ್ಕಾರ ಪ್ರಾರಂಭಿಸಿದ ಎಂಜಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ.. ಹೊಸ ಮಸೂದೆ ಉದ್ಯೋಗ ಖಾತರಿ ದಿನಗಳನ್ನು 125ಕ್ಕೆ ಹೆಚ್ಚಿಸುತ್ತದೆ.
ಕೆಲಸ ಮುಗಿದ ಒಂದು ವಾರ ಅಥವಾ 15 ದಿನಗಳ ಒಳಗೆ ಕಾರ್ಮಿಕರಿಗೆ ಕೂಲಿ ನೀಡಬೇಕು. ಗಡುವಿನೊಳಗೆ ಪಾವತಿ ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಸಹ ಅವಕಾಶವಿದೆ. ಹೊಸ ಮಸೂದೆಯು, ಯೋಜನೆಯಲ್ಲಿನ ಕೆಲಸವನ್ನು ‘ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತು ಸ್ಥಿತಿಸ್ಥಾಪಕ – ಈ ರೀತಿ 4 ವಿಭಾಗಗಳಾಗಿ ವಿಂಗಡಿಸಿದೆ.
ನಕಲಿ ಕೂಲಿ ಕಾರ್ಮಿಕರ ಸೃಷ್ಟಿ ಮಾಡಿ ಕೂಲಿ ಹಣ ಪಡೆಯುವುದನ್ನು ತಪ್ಪಿಸಲು ಹಾಗೂ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು, ಬಯೋಮೆಟ್ರಿಕ್ಸ್ ಮತ್ತು ಜಿಯೋಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ. ವಿವಿಧ ಹಂತಗಳಲ್ಲಿ ಕುಂದುಕೊರತೆ ಪರಿಹಾರದ ಅವಕಾಶವೂ ಇದೆ.
ಪ್ರಸ್ತುತ ಉದ್ಯೋಗದ ಸ್ಥಿತಿಗತಿ
ಕಾನೂನು 100 ದಿನಗಳ ಉದ್ಯೋಗ ಖಾತರಿ ನೀಡಿದ್ದರೂ, 2024-25ರಲ್ಲಿ ಪ್ರತಿ ಕುಟುಂಬಕ್ಕೆ ಒದಗಿಸಿದ ಸರಾಸರಿ ಉದ್ಯೋಗದ ದಿನಗಳು ಕೇವಲ 50 ದಿನಗಳು ಮಾತ್ರ. ಕಳೆದ ವರ್ಷ 40.70 ಲಕ್ಷ ಕುಟುಂಬಗಳು 100 ದಿನಗಳ ಗರಿಷ್ಠ ಮಿತಿಯನ್ನು ಪೂರೈಸಿದ್ದವು. ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಡಿಸೆಂಬರ್ 12, 2025ರವರೆಗೆ ಕೇವಲ 6.74 ಲಕ್ಷ ಕುಟುಂಬಗಳು ಮಾತ್ರ 100 ದಿನಗಳ ಉದ್ಯೋಗದ ಮಿತಿಯನ್ನು ತಲುಪಿವೆ.
2024-25ರಲ್ಲಿ ಸೃಷ್ಟಿಯಾದ ಒಟ್ಟು 290 ಕೋಟಿ ಮಾನವ ದಿನಗಳ ಪೈಕಿ, ಕೇವಲ 4.35 ಕೋಟಿ ಮಾನವ ದಿನಗಳನ್ನು ರಾಜ್ಯಗಳು ತಮ್ಮದೇ ಬಜೆಟ್‌ನಿಂದ ಒದಗಿಸಿವೆ. ಹರಿಯಾಣ, ಸಿಕ್ಕಿಂ ರಾಜ್ಯಗಳಲ್ಲಿ ನರೇಗಾ ವೇತನವು ಅತಿ ಹೆಚ್ಚು (ತಲಾ ₹374) ಇದ್ದರೆ, ಗೋವಾದಲ್ಲಿ ₹356, ಕರ್ನಾಟಕದಲ್ಲಿ ₹349, ಕೇರಳದಲ್ಲಿ ₹346 ಇದೆ. ಅರುಣಾಚಲ ಪ್ರದೇಶದಲ್ಲಿ ಅತಿ ಕಡಿಮೆ (₹234) ಇದ್ದರೆ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ತಲಾ ₹237 ಇದೆ. ತ್ರಿಪುರಾದಲ್ಲಿ ನರೇಗಾ ವೇತನ ₹242 ಆಗಿದೆ. ಅಂದರೆ, ಒಂದೇ ಯೋಜನೆಯಲ್ಲಿ ನೀಡಲಾಗುವ ವೇತನದಲ್ಲಿ ಕೆಲವು ರಾಜ್ಯಗಳ ನಡುವೆ ₹100ಕ್ಕಿಂತ ಹೆಚ್ಚು ವ್ಯತ್ಯಾಸ ಇರುವುದನ್ನು ಕಾಣಬಹುದಾಗಿದೆ.
ಹೊಸ ಪ್ರಸ್ತಾವನೆಯಲ್ಲಿ ಏನಿದೆ?
ಹೊಸ ಪ್ರಸ್ತಾವನೆಯು 2026ರ ಏಪ್ರಿಲ್ 1ರಿಂದ ಜಾರಿಗೆ ಬರುವ ಹದಿನಾರನೇ ಹಣಕಾಸು ಆಯೋಗದ ಪ್ರಶಸ್ತಿಗಳಲ್ಲಿ ಯೋಜನೆಯ ಮುಂದುವರಿಕೆಗೆ ಸರ್ಕಾರವು ಈಗಾಗಲೇ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಬಂದಿದೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು MGNREGA ಕಾರ್ಮಿಕರಿಗೆ 100 ದಿನಗಳ ಕೆಲಸದ ಮಿತಿಯನ್ನು ಹೆಚ್ಚಿಸುವಂತೆ ಹಿಂದೆ ಬೇಡಿಕೆಗಳನ್ನು ಸಲ್ಲಿಸಿವೆ.
ರಾಜ್ಯಗಳು 100 ದಿನಗಳಿಗಿಂತ ಹೆಚ್ಚು ಕೆಲಸವನ್ನು ಒದಗಿಸಬಹುದು, ಆದರೆ ಅದಕ್ಕೆ ತಾವೇ ಹಣ ನೀಡಬೇಕಾಗುತ್ತದೆ. ಕೆಲವೇ ಕೆಲವು ರಾಜ್ಯಗಳು (ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣ) ತಮ್ಮದೇ ಸಂಪನ್ಮೂಲಗಳಿಂದ ಹೆಚ್ಚುವರಿ ಕೆಲಸವನ್ನು ಒದಗಿಸುತ್ತಿವೆ.
5.23 ಲಕ್ಷ ಕೋಟಿ ಒದಗಿಸಲು ಪ್ರಸ್ತಾವನೆ
ಎಂಜಿನರೇಗಾ ಕಾಯ್ದೆಯ ಸೆಕ್ಷನ್ 3 (1), ಒಂದು ಹಣಕಾಸು ವರ್ಷದಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ “ಕನಿಷ್ಠ ನೂರು ದಿನಗಳ” ಕೆಲಸವನ್ನು ಒದಗಿಸಲು ಅವಕಾಶ ನೀಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಎಂಜಿನರೇಗಾ ಅಡಿಯಲ್ಲಿ ಕೆಲಸ ಮಾಡಿದ ಕುಟುಂಬಗಳ ಸಂಖ್ಯೆ ಕ್ರಮೇಣ ಕುಸಿದಿದೆ. 2020-21ರಲ್ಲಿ ದಾಖಲೆಯ 7.55 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆದಿದ್ದರೆ, 2024-25ರಲ್ಲಿ ಇದು 5.79 ಕೋಟಿಗೆ ಇಳಿದಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಯೋಜನೆಯನ್ನು ಮುಂದುವರಿಸಲು 2029-30ರ ವರೆಗೆ ಐದು ವರ್ಷಗಳ ಅವಧಿಗೆ ರೂ 5.23 ಲಕ್ಷ ಕೋಟಿ ಒದಗಿಸಲು ಪ್ರಸ್ತಾವನೆಯನ್ನು ಹಣಕಾಸು ವೆಚ್ಚ ಸಮಿತಿಗೆ ಸಲ್ಲಿಸಿದೆ.


