Homeಕರ್ನಾಟಕದೇವೇಗೌಡರು ಸಿಬಿಐ ಅನ್ನು 'ಚೋರ್‌ ಬಚಾವೋ ಸಂಸ್ಥೆ' ಎಂದು ಕರೆದಿದ್ದು ನೆನಪಿಲ್ವಾ: ಸಿದ್ದರಾಮಯ್ಯ ಪ್ರಶ್ನೆ

ದೇವೇಗೌಡರು ಸಿಬಿಐ ಅನ್ನು ‘ಚೋರ್‌ ಬಚಾವೋ ಸಂಸ್ಥೆ’ ಎಂದು ಕರೆದಿದ್ದು ನೆನಪಿಲ್ವಾ: ಸಿದ್ದರಾಮಯ್ಯ ಪ್ರಶ್ನೆ

ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವ ಕುರಿತಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸ ನಂಬಿಕೆ ಇದೆ. ಅವರು ಕಾನೂನು ರೀತ್ಯಾ ತನಿಖೆ ನಡೆಸಲಿದ್ದಾರೆ” ಎಂದು ತಿಳಿಸಿದರು.

“ಬಿಜೆಪಿಯವರು ಯಾವತ್ತೂ ಸಿಬಿಐಗೆ ಒಂದು ಪ್ರಕರಣವಾದರೂ ಕೊಟ್ಟಿದ್ದಾರಾ? ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಡಿ ಕೆ ರವಿ ಪ್ರಕರಣ, ಲಾಟರಿ ಪ್ರಕರಣ, ಸಚಿವರಾದ ಕೆ ಜೆ ಜಾರ್ಜ್‌ ಅವರ ಮೇಲಿನ ಆರೋಪ, ಪರೇಶ್‌ ಮೇಸ್ತ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣಗಳಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯೇ” ಎಂದು ಪ್ರಶ್ನಿಸಿದರು.

“ಹಿಂದೆ ಬಿಜೆಪಿಯವರೇ ಸಿಬಿಐ ಯನ್ನು ಕರಪ್ಷನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಎಂದು ಬಣ್ಣಿಸಿದ್ದಾರೆ. ದೇವೇಗೌಡರು ಚೋರ್‌ ಬಚಾವೋ ಸಂಸ್ಥೆ ಎಂದು ಹೇಳಿದ್ದರು. ಈಗ ಸಿಬಿಐ ಮೇಲೆ ವಿಶ್ವಾಸ ಬಂತಾ? ನನಗೆ ಎಸ್‌ಐಟಿ ಮೇಲೆ ವಿಶ್ವಾಸವಿದೆ. ಆದರೆ, ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ. ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ” ಎಂದು ವಿವರಿಸಿದರು.

“ನಮ್ಮ ಸರ್ಕಾರ ಕಾನೂನು ರೀತ್ಯ ನಡೆಯುತ್ತಿರುವ ಕೆಲಸದಲ್ಲಿ, ತನಿಖೆಯಲಗಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಸರಿಯಾದ ರೀತಿಯಲ್ಲಿ ಕೆಲಸ ಮಾಡುವ ನಂಬಿಕೆ ಇದೆ. ನಾನು ಯಾವತ್ತೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ. ಅಂತರರಾಷ್ಟ್ರೀಯ ಮಟ್ಟದ ತನಿಖೆಯ ಅಗತ್ಯವಿಲ್ಲ. ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ನಾವು ನಂಬುತ್ತೇವೆ” ಎಂದರು.

“ಈ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್‌ ಆಗಲೀ, ಯಾರೂ ಭಾಗಿಯಾಗಿಲ್ಲ. ನನಗೆ ಎಸ್.ಐ.ಟಿ. ಮೇಲೆ ವಿಶ್ವಾಸವಿದೆ. ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆ” ಎಂದು ತಿಳಿಸಿದರು.

ರೇವಣ್ಣ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ

ರೇವಣ್ಣ ಅವರ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಅವರ ಮೇಲಿನ ಆರೋಪದಲ್ಲಿ ಹುರುಳೇ ಇಲ್ಲದಿದ್ದರೆ ನಿರೀಕ್ಷಣಾ ಜಾಮೀನು ಕೋರಿದ್ದೇಕೆ? ನಿರೀಕ್ಷಣಾ ಜಾಮೀನು ಅರ್ಜಿ ಯಾಕೆ ತಿರಸ್ಕೃತವಾಯಿತು” ಎಂದು ಪ್ರಶ್ನಿಸಿದರು.

ಪ್ರಜ್ವಲ್‌ ಪ್ರಕರಣ, ಸಿಬಿಐಗೆ ಕೊಡುವ ಅಗ‌ತ್ಯವಿಲ್ಲ, ದೇವೇಗೌಡರು, ಸಿಬಿಐ, ಸಿಎಂ ಸಿದ್ದರಾಮಯ್ಯ, Prajwal case, no need to give to CBI, Deve Gowda, CBI, CM Siddaramaiah

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments