ಹೆಚ್ ಡಿ ರೇವಣ್ಣ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ, ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆ ಜಮಾಯಿಸಿದ್ದ ಅವರ ಅಭಿಮಾನಿಗಳು ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಈ ವೇಳೆ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆ ಅಪಹಿರಸಿದ ಆರೋಪದ ಮೇಲೆ ಜೈಲು ಸೇರಿದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೆ ಸೋಮವಾರ (ಮೇ. 13) ಷರತ್ತು ಬದ್ಧ ಜಾಮೀನು ಮಂಜೂರು ಆಗಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ (ಮೇ 14) ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂಬ ವಿಚಾರ ತಿಳಿದಿದ್ದ ಅವರ ಬೆಂಬಲಿಗರು ಮತ್ತು ನೂರಾರು ಜೆಡಿಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆ ಜಮಾಯಿಸಿದ್ದರು. ಈ ವೇಳೆ ಸಂಭ್ರಮಿಸುತ್ತಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.
ರೇವಣ್ಣ ಅವರಿಗೆ ನ್ಯಾಯಾಲಯ ಸೋಮವಾರವೇ ಷರತ್ತು ಬದ್ಧ ಜಾಮೀನು ನೀಡಿತ್ತು. ಜಾಮೀನು ನೀಡುವಷ್ಟರಲ್ಲಿ ನ್ಯಾಯಾಲಯದ ಸಮಯ ಆಗಿದ್ದರಿಂದ ಕೋರ್ಟ್ ಪ್ರಕ್ರಿಯೆಗಳು ಇಂದಿಗೆ (ಮೇ 14) ಮುಂದೂಡಲಾಗಿತ್ತು. ಹೀಗಾಗಿ ಹೆಚ್ಡಿ ರೇವಣ್ಣ ಸೋಮವಾರದ ರಾತ್ರಿಯನ್ನು ಜೈಲಿನಲ್ಲೇ ಕಳೆದರು. ಮಂಗಳವಾರ ಕೋರ್ಟ್ ಪ್ರಕ್ರಿಯೆಗಳು ಮುಗಿದಿದ್ದು, ಇದೀಗ ಜೈಲಿಂದ ಬಿಡುಗಡೆಯಾಗಿದ್ದಾರೆ.
ಕಿಡ್ನಾಪ್ ಕೇಸ್ ನಲ್ಲಿ ಜೈಲು
ಪ್ರಜ್ವಲ್ ರೇವಣ್ಣ ಅವರದ್ದು ಅಂತ ಬಿಡುಗಡೆಯಾಗಿರುವ ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್ಐಟಿ ಗುರುತಿಸಿದೆ. ರೇವಣ್ಣ ಮೊದಲ ಆರೋಪಿಯಾಗಿದ್ದಾರೆ.