ನನಗೆ ಮೋಸ ಮಾಡಿ ಹೋಗಿದ್ದ ಬೈರತಿ ಬಸವರಾಜು ದಾವಣಗೆರೆಯಲ್ಲಿ ಬಿಜೆಪಿಗೆ ಲಾಭ ಆಗಲಿ ಎಂದು ವಿನಯ್ ಕುಮಾರ್ಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ದಾವಣಗೆರೆಯಲ್ಲಿ ನಡೆದ ಕುರುಬ ಸಮುದಾಯದ ಮತ್ತು ಹಿಂದುಳಿದ ಸಮಾಜಗಳ ಸಭೆಯಲ್ಲಿ ಅವರು ಮಾತನಾಡಿ, “ಬಿಜೆಪಿ ಹಿಂದುಳಿದವರನ್ನು ಬಳಸಿಕೊಂಡು ಬಿಸಾಡುತ್ತದೆ. ಇದಕ್ಕೆ ಕೆ.ಎಸ್.ಈಶ್ವರಪ್ಪ ಕೂಡ ಸ್ಪಷ್ಟ ಉದಾಹರಣೆ. ನನ್ನ ವಿರುದ್ಧ ರಕ್ತ ಕಾರುತ್ತಿದ್ದ ಈಶ್ವರಪ್ಪ ಅವರ ಮಗನಿಗೂ ಬಿಜೆಪಿ ಟಿಕೆಟ್ ಕೊಡಲಿಲ್ಲ. ಇದೇ ಬಿಜೆಪಿಯ ಜಾಯಮಾನ” ಎಂದರು.
“ನಿಮಗೆ ನಾನು ಬೇಕೋ-ವಿನಯ್ ಬೇಕೋ ತೀರ್ಮಾನ ಮಾಡಿ. ನಾನು ಬೇಕು ಅಂದ್ರೆ ವಿನಯ್ಗೆ ಒಂದೂ ಓಟು ಹಾಕಬೇಡಿ. ಬಿಜೆಪಿ ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ. ಇಂಥಾ ಬಿಜೆಪಿಗೆ ವಿನಯ್ ಸಪೋರ್ಟ್ ಆಗುವಂತೆ ಮಾಡಿದ್ದು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಲ್ಲ. ಇಲ್ಲಿ ನಾನೇ ಅಭ್ಯರ್ಥಿ. ಕಾಂಗ್ರೆಸ್ ಗೆ ಹಾಕುವ ಒಂದೊಂದು ಮತಗಳೂ ನನಗೇ ಹಾಕಿದಂತೆ. ವಿಯನ್ ಗೆ ಹಾಕುವ ಒಂದೊಂದು ಮತವೂ ನನ್ನ ವಿರುದ್ಧ ಹಾಕಿದಂತೆ” ಎಂದು ಸೂಚಿಸಿದರು.
“ಮೋದಿ ಸುಳ್ಳನ್ನೇ ಮಾರುಕಟ್ಟೆ ಮಾಡಿ ಜಾತಿ-ಧರ್ಮದ ಹೆಸರಲ್ಲಿ ಸಮಾಜ ಒಡೆದದ್ದೇ ಸಾಧನೆ. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ನನಗೆ ತೊಡೆ ತಟ್ಟಿದ್ದರು. ಪಾದಯಾತ್ರೆ ಮಾಡಿ ಸೊಕ್ಕು ಮುರಿದೆ. ಹಿಂದುಳಿದವರ ಶತ್ರು ಬಿಜೆಪಿಗೆ ಮತ ಹಾಕೋದಕ್ಕೆ ಕಾರಣವೇ ಇಲ್ಲ. ಬಿಜೆಪಿ ಕುರುಬರಿಗೆ ಒಂದೂ ಸೀಟು ಕೊಟ್ಟಿಲ್ಲ. ನೀವೂ ಬಿಜೆಪಿಗೆ ಒಂದು ಓಟೂ ಕೊಡಬೇಡಿ” ಎಂದರು.
“ಹಿಂದುಳಿದವರಿಗೆ ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದು ಬಿಜೆಪಿ, ಮಹಿಳೆಯರಿಗೆ ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದು ಬಿಜೆಪಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದು ಬಿಜೆಪಿ, ಬಿಜೆಪಿಯ ರಾಮಾ ಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಹೀಗಾಗಿ ಬಿಜೆಪಿ ಪಕ್ಕಾ ಹಿಂದುಳಿದವರ, ಶ್ರಮಿಕರ, ದುಡಿಯುವ ವರ್ಗಗಳ ವಿರೋಧಿ. ಸುಳ್ಳನ್ನು ಮಾರ್ಕೆಟ್ ಮಾಡಿ ಮೋದಿ ಭಾರತೀಯರಿಗೆ ಮಾಡಿದ ಮೋಸಕ್ಕೆ, ನಂಬಿಕೆ ದ್ರೋಹಕ್ಕೆ ಪಾಠ ಕಲಿಸಿ” ಎಂಂದು ಹೇಳಿದರು.