Homeಕರ್ನಾಟಕಮಮದಾಪುರ ಕಾನನಕ್ಕೆ ಸಿದ್ದೇಶ್ವರ ಸ್ವಾಮಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಮರು ನಾಮಕರಣ

ಮಮದಾಪುರ ಕಾನನಕ್ಕೆ ಸಿದ್ದೇಶ್ವರ ಸ್ವಾಮಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಮರು ನಾಮಕರಣ

ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ 1494 ಎಕರೆ 38 ಗುಂಟೆ ಅರಣ್ಯ ಪ್ರದೇಶಕ್ಕೆ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯ ಸ್ಮರಣೆಯ ದಿನವಾದ ಜನವರಿ 2ರಂದು ವಿಜಯಪುರದಲ್ಲಿ ವಿಧ್ಯುಕ್ತವಾಗಿ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಫಲಕವನ್ನು ಅನಾವರಣ ಮಾಡಲಾಗುವುದು” ಎಂದು ತಿಳಿಸಿದರು.

“ವಿವಿಧ ಕಾಲಾವಧಿಯಲ್ಲಿ ಮಮದಾಪುರ ಭಾಗದಲ್ಲಿನ ಅರಣ್ಯ ಪ್ರದೇಶಗಳ ಅಧಿಸೂಚನೆಯಾಗಿದ್ದು, ಪ್ರಸ್ತುತ ಸುಮಾರು 1494 ಎಕರೆ 38 ಗುಂಟೆ ವಿಸ್ತೀರ್ಣದ ಅರಣ್ಯವಿದೆ. ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಮತ್ತು ಸಸ್ಯ ಸಂಕುಲದಿಂದ ಕೂಡಿರುವ ಶ್ರೀಮಂತ ಜೀವವೈವಿಧ್ಯತೆಯ ಈ ತಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವೀಧ್ಯ ಪಾರಂಪರಿಕ ತಾಣ ಎಂದು ಜೀವವೈವಿಧ್ಯ ಕಾಯಿದೆ 2022ರ ಸೆಕ್ಷನ್ 37ರನ್ವಯ ಮರು ನಾಮಕರಣ ಮಾಡಲಾಗುತ್ತಿದೆ” ಎಂದರು.

“ಮಮದಾಪುರದ ಅಧಿಸೂಚಿತ ಅರಣ್ಯ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಿಂದ ಕೂಡಿದ ಪ್ರದೇಶವಾಗಿದ್ದು, ಚಿರತೆಗಳು, ನರಿಗಳು, ಕತ್ತೆ ಕಿರುಬಗಳು ಮತ್ತು ಹಲವಾರು ಪ್ರಭೇದದ ಪಕ್ಷಿಗಳತಾಣವಾಗಿದೆ. ಸಸ್ಯ ಸಂಕುಲ, ಕೀಟ ಸಂಕುಲದ ನೆಲೆವೀಡೂ ಆಗಿದೆ. ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ಅರಣ್ಯ ಪ್ರದೇಶವೇ ಕಡಿಮೆ ಇದ್ದು, ಇರುವ ವನ ಪ್ರದೇಶವನ್ನು ಮತ್ತು ಇಲ್ಲಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು ಇಂದಿನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಿದ್ಧೇಶ್ವರ ಶ್ರೀಗಳ ಹೆಸರನ್ನು ಈ ಕಾನನ ಪ್ರದೇಶಕ್ಕೆ ಇಡುವುದರಿಂದ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲೂ ನೆರವಾಗಲಿದೆ” ಎಂದು ಈಶ್ವರ ಖಂಡ್ರೆ ತಿಳಿಸಿದರು.

“ಪಾರಂಪರಿಕ ತಾಣ ಘೋಷಣೆಯಿಂದ ಸ್ಥಳೀಯ ಜನರ ಅಥವಾ ಈ ಕಾಡನ್ನು ಅವಲಂಬಿಸಿರುವ ಆದಿವಾಸಿಗಳ ದೈನಂದಿನ ಬದುಕಿನ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಪಾರಂಪರಿಕ ತಾಣದ ನಿರ್ವಹಣೆಯಲ್ಲಿ ಸ್ಥಳೀಯ ಜನರು ಸಂಪೂರ್ಣ ಪಾಲ್ಗೊಳ್ಳಲು ನೆರವಾಗುತ್ತದೆ. ಆದರೆ, ಜೀವವೈವಿಧ್ಯತೆಯ ಸಂರಕ್ಷಣೆಗೆ ಬಾಧಕವಾಗುವ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ” ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments