ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾರ್ಯದರ್ಶಿಗಳ ನಡುವಿನ ಶೀತಲ ಸಮರಕ್ಕೆ ತಡೆಯೊಡ್ಡಲು ರಾಜ್ಯ ಸರ್ಕಾರ ಕೆಪಿಎಸ್‌ಸಿ ಕಾರ್ಯದರ್ಶಿ ಕೆ ಎಸ್ ಲತಾ ಕುಮಾರಿ ಅವರಿಗೆ 10 ದಿನ ಗಳಿಕೆ ರಜೆ ಮಂಜೂರು ಮಾಡಿದೆ.
ಅಧ್ಯಕ್ಷರು ಮತ್ತು ಸದಸ್ಯರ ಕಾರ್ಯವೈಖರಿ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರು, ‘ಆಯೋಗ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗದ ರೀತಿಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ಅರಿವು ಮೂಡಿಸಬೇಕು. ವಿವಿಧ ಹುದ್ದೆಗಳಿಗೆ ನಿಯಮಾನುಸಾರ ಆಯ್ಕೆ ಪೂರ್ಣಗೊಳಿಸಲು ಸೂಚನೆ ನೀಡಬೇಕು’ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದ ರಾಜ್ಯ ಸರ್ಕಾರ ಒಂದು, ಅಧ್ಯಕ್ಷರು ಮತ್ತು ಸದಸ್ಯರ ನಡವಳಿಕೆ ಕುರಿತು ತಿಳಿವಳಿಕೆ ತುಂಬಲು ರಾಜ್ಯಪಾಲರಿಗೆ ಸರ್ಕಾರ ಸೂಚಿಸಬೇಕಿತ್ತು. ಇಲ್ಲ, ಕಾರ್ಯದರ್ಶಿ ಲತಾ ಕುಮಾರಿಯವರನ್ನು ವರ್ಗಾಯಿಸಬೇಕಿತ್ತು. ಇಂತಹ ಇಕ್ಕಟ್ಟಿನಲ್ಲಿ ಅವರಿಗೆ ರಜೆ ಮಂಜೂರು ಮಾಡಿದೆ.
ಡಿಪಿಎಆರ್ ಇಲಾಖೆಯ ಈ ಕುರಿತು ಬುಧವಾರ ಆದೇಶ ಹೊರಡಿಸಿದೆ. ಕೆ.ಎಸ್. ಲತಾ ಕುಮಾರಿ ಅವರಿಗೆ ಫೆಬ್ರುವರಿ 7 ರಿಂದ ಫೆಬ್ರುವರಿ 17ರವರೆಗೆ ಗಳಿಕೆ ರಜೆ ನೀಡಲಾಗಿದೆ. ಅವರ ರಜೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಕೆ ಅವರನ್ನು ಕೆಪಿಎಸ್‌ಸಿ ಪ್ರಭಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಿ ಆದೇಶಿಸಿದೆ.
ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಕೆಲ ಸದಸ್ಯರು ಮತ್ತು ಲತಾಕುಮಾರಿ ಅವರ ನಡುವೆ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆಯೇ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.