ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಹಾಗೂ ಆರ್ಸಿಬಿ ಪಂದ್ಯದ ಟಿಕೆಟ್ ಖರೀದಿಸಲು ಹೋದ ಬೆಂಗಳೂರು ನಗರದ ಅಭಿಮಾನಿಯೊಬ್ಬ ಬರೋಬ್ಬರಿ ₹3 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.
ಬದ್ಧ ಎದುರಾಳಿಗಳಾಗಿರುವ, ಪ್ಲೇ ಆಫ್ ಹಂತಕ್ಕೇರಲು ಮಹತ್ವದ ಪಂದ್ಯವಾಗಿರುವ ಕಾರಣ ಈ ಪಂದ್ಯದ ಕಾವು ಹೆಚ್ಚಾಗಿದೆ. ಹೀಗಾಗಿ ಈ ಪಂದ್ಯ ನೋಡಲು ಅಭಿಮಾನಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆ ಕೊಟ್ಟು ಟಿಕೆಟ್ ಖರೀದಿ ಮಾಡುತ್ತಿದ್ದಾರೆ.
ಪದ್ಮ ಸಿನ್ಹಾ ವಿಜಯ್ ಕುಮಾರ್ ಎನ್ನುವಾತ ಐಪಿಎಲ್_2024 ಟಿಕೆಟ್ಸ್_24 ಎಂಬ ಖಾತೆಯ ಮೂಲಕ ಪಂದ್ಯಗಳ ಟಿಕೆಟ್ ಬುಕ್ಕಿಂಗ್ ಮಾಡಿಕೊಡಲಾಗುವುದು ಎಂದು ಹೇಳಿ ತನ್ನ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಮಾಹಿತಿ ಎಲ್ಲವನ್ನೂ ಹಂಚಿಕೊಂಡು, ಪ್ರತಿ ಟಿಕೆಟ್‌ಗೆ ₹2,300 ದರದಂತೆ 3 ಟಿಕೆಟ್‌ಗೆ ₹7,900 ನಿಗದಿ ಪಡಿಸಿದ್ದ. ಈ ಮೂಲಕ ಟಿಕೆಟ್ ಖರೀದಿಸಲು ಬರುವವರ ವಿಶ್ವಾಸ ಸಂಪಾದಿಸಿದ್ದ. ಇದನ್ನು ನಂಬಿದ ಬೆಂಗಳೂರು ಮೂಲದ 28 ವರ್ಷದ ಅಭಿಮಾನಿಯೊಬ್ಬ ಟಿಕೆಟ್ ಖರೀದಿಸಲು ಮುಂದಾಗಿ ತನ್ನ ಖಾತೆಯಲ್ಲಿದ್ದ ₹3 ಲಕ್ಷ ಕಳೆದುಕೊಂಡಿದ್ದಾನೆ.
ವಿಜಯ್ ಕುಮಾರ್ ಆನ್‌ಲೈನ್ ಪಾವತಿ ಭರವಸೆ ನೀಡಿದ್ದಂತೆ ಈ ಅಭಿಮಾನಿಗೆ 3 ಇ-ಟಿಕೆಟ್‌ಗಳನ್ನು ವರ್ಗಾಯಿಸಿದ್ದಾನೆ. ಆದರೆ, ಹಣ ಪಾವತಿ ನಿಲ್ಲದೆ ಆಗಾಗ ಈ ಅಭಿಮಾನಿಯ ಖಾತೆಯಿಂದ ₹7,900ಗಳಂತೆ ಹಣ ವರ್ಗಾವಣೆ ಆಗಿ ₹3 ಲಕ್ಷ ಗಳಿಗೂ ಅಧಿಕ ಮೊತ್ತ ವಂಚಕನ ಖಾತೆಗೆ ಸೇರಿದೆ. ಈ ವೇಳೆ ಅಭಿಮಾನಿ ವಿಜಯ್ ಕುಮಾರ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾಂತ್ರಿಕ ದೋಷ ಕಾರಣ ಹೀಗಾಗಿದ್ದು, ಹಣವನ್ನು ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾನೆ.
ಆ ಬಳಿಕವೂ ಕೂಡ ಹಣ ವರ್ಗಾವಣೆ ನಡೆದ ಕಾರಣ ಅನುಮಾನಗೊಂಡ ಅಭಿಮಾನಿ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ಪಾವತಿಯನ್ನು ತಡೆಯುವ ಹೊತ್ತಿಗಾಗಲೇ ₹3 ಲಕ್ಷ ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದು, ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.