ಜಾತಿನಿಂದನೆ ಪ್ರಕರಣದಲ್ಲಿ ನ್ಯಾಯಾಂಗದ ಬಂಧನದಲ್ಲಿದ್ದು ಷರತ್ತುಬದ್ಧ ಜಾಮೀನನ ಮೇಲೆ ಬಿಡುಗಡೆಯಾದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆ ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುನಿರತ್ನ ಅವರು ನ್ಯಾಯಾಂಗದ ಬಂಧನದಲ್ಲಿ ಇದ್ದರು. ಮುನಿರತ್ನ ಪರ ವಕೀಲರು ಜಾಮೀನು ಪ್ರತಿಯನ್ನು ಜೈಲಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಎಲ್ಲ ಪ್ರಕ್ರಿಯೆ ಮುಗಿದ ಕೂಡಲೇ ಕಗ್ಗಲಿಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡರು. ಮುನಿರತ್ನ ಅವರನ್ನು ವಶಕ್ಕೆ ಪಡೆಯಲು ರಾಮನಗರ ಪೊಲೀಸರು ಗುರುವಾರ ರಾತ್ರಿಯಿಂದಲೂ ಜೈಲು ಬಳಿ ಬೀಡುಬಿಟ್ಟಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಮತ್ತೆ ಬಂಧಿಸಲಾಗಿದೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಬೆದರಿಕೆ ಹಾಕಿ, ಒಕ್ಕಲಿಗ ಸಮುದಾಯ ಉದ್ದೇಶಿಸಿ ಪತ್ನಿಗೆ ಅಶ್ಲೀಲ ಪದಗಳನ್ನು ಬಳಸಿ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು.
ಜಾತಿ ನಿಂದನೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಗುರುವಾರ ಜಾಮೀನು ಪಡೆದುಕೊಂಡಿದ್ದರು. 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ದೂರು ದಾಖಲಿಸಿದ್ದು, ಈ ಪ್ರಕರಣದಲ್ಲಿ ಮುನಿರತ್ನ ಅವರನ್ನು ಮತ್ತೆ ಬಂಧಿಸಲಾಗಿದೆ.