ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ರಾತ್ರಿ 12.40 ಗಂಟೆ ಸುಮಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ಸಾಧ್ಯತೆ ಇದೆ.
ಜರ್ಮನಿಯ ಮೂನಿಕ್ ನಗರದಿಂದ ಬೆಂಗಳೂರಿನತ್ತ ಈಗಾಗಗಲೇ ಹೊರಟಿದ್ದು, ಏರ್ ಲುಫ್ತಾನ್ಸ್ ವಿಮಾನದಲ್ಲಿ (ಎಲ್‌ಎಚ್ 764) ಪ್ರಜ್ವಲ್ ರೇವಣ್ಣ ಇರುವ ಮಾಹಿತಿ ಎಸ್‌ಐಟಿಗೆ ಲಭಿಸಿದೆ.
ಗುರುವಾರ ರಾತ್ರಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಹೀಗಾಗಿ, ನಿಲ್ದಾಣದಲ್ಲಿಯೇ ಅಧಿಕಾರಿಗಳ ತಂಡ ಪ್ರಜ್ವಲ್ ಆಗಮನಕ್ಕೆ ಕಾದು ನಿಂತಿದೆ.
ಬಿಗಿ ಭದ್ರತೆ
ವಿಮಾನ ನಿಲ್ದಾಣ ಹಾಗೂ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಕರೆದೊಯ್ಯಲಿವು ಬಳ್ಳಾರಿ ರಸ್ತೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್‌ಐಟಿ ಮುಖ್ಯಸ್ಥ ಬಿ ಕೆ ಸಿಂಗ್ ಅವರ ಮನವಿ ಮೇರೆಗೆ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಭದ್ರತೆಗೆ ಸಂಬಂಧಪಟ್ಟಂತೆ ಪೊಲೀಸರಿಗೆ ಕೆಲ ಸೂಚನೆ ನೀಡಿದ್ದಾರೆ.