ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಸಂಸದೆ ಶೋಭಾ ಕರದ್ಲಾಂಜೆ ಅವರು, ತಮಿಳುನಾಡಿನಿಂದ ಬಂದು ರಾಮೇಶ್ವರಂ ಕೆಫೆ ಸ್ಫೋಟಿಸಿದ್ದಾರೆ ಎಂದು ಹೇಳಿದ್ದು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಈ ಪ್ರಕರಣದಲ್ಲಿ ಬಿಜೆಪಿ ಮುಖಂಡನನ್ನೇ ವಿಚಾರಣೆಗೆ ಒಳಪಡಿಸಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸ್ಥಳೀಯ ಬಿಜೆಪಿಯ ಘಟಕದ ಮುಖಂಡರೊಬ್ಬರನ್ನು ಎನ್ಐಎ ತನಿಖೆಗೆ ಒಳಪಡಿಸಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎನ್ಐಎ ತನಿಖಾಧಿಕಾರಿಗಳು ಈಚೆಗೆ ಕಾರ್ಯಚರಣೆ ನಡೆಸಿದ್ದರು. 10 ದಿನಗಳ ಹಿಂದೆ ಕರ್ನಾಟಕದ ತೀರ್ಥಹಳ್ಳಿಯಲ್ಲೂ ಕಾರ್ಯಾಚರಣೆ ನಡೆದಿತ್ತು. ಆ ವೇಳೆ ತೀರ್ಥಹಳ್ಳಿಯ ಕೆಲವು ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ ತೀರ್ಥಹಳ್ಳಿಯ ಬಿಜೆಪಿ ಸ್ಥಳೀಯ ಮುಖಂಡರೊಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಬೆಟ್ಟಮಕ್ಕಿಯ ಸಾಯಿ ಪ್ರಸಾದ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿರುವ ತೀರ್ಥಹಳ್ಳಿ ಮೂಲದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ. ಎನ್‌ಐಎ ವಶಕ್ಕೆ ಪಡೆದಿದ್ದ ತೀರ್ಥಹಳ್ಳಿಯ ಮೊಬೈಲ್ ಅಂಗಡಿಯ ಮಾಲೀಕನೊಂದಿಗೆ ಬಿಜೆಪಿ ಮುಖಂಡರ ಸಂಪರ್ಕವಿದ್ದು, ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಜೊತೆಗೆ ಬಂಧಿತ ಶಂಕಿತನಿಗೆ ಬಿಜೆಪಿ ಮುಖಂಡ, ಮೈಸೂರಿನ ತನ್ನ ಸಂಬಂಧಿಕರ ಹೋಟೆಲ್‌ನಲ್ಲಿ ಕೆಲಸ ಕೊಡಿಸಿದ ಬಗ್ಗೆಯೂ ಎನ್ ಐಎ ವಿಚಾರಣೆ ನಡೆಸಿದೆ.