ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. 30 ದಿನಗಳ ಉಪವಾಸ ಇಂದಿಗೆ ಅಂತ್ಯವಾಗಲಿದ್ದು, ಈಗಾಗಲೇ ಈದ್ಗಾ ಮೈದಾನದಲ್ಲಿ ಮುಸ್ಲಿಮ ಸಮುದಾಯದವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಜಮಾಯಿಸಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಲಿದ್ದಾರೆ. ಈದ್ಗಾ ಮೈದಾನದ ಸುತ್ತಮುತ್ತಲೂ ಹೆಚ್ಚಿನ ಜನ ಸೇರುವ ಸಾಧ್ಯತೆಯಿದ್ದು, ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಗಾಳಿ ಆಂಜನೇಯ ದೇವಸ್ಥಾನದಿಂದ ಟೌನ್ ಹಾಲ್‌ವರೆಗಿನ ರಸ್ತೆಯನ್ನು ಬಂದ್ ಮಾಡಲಾಗಿದೆ. ಈದ್ಗಾ ಮೈದಾನದ ಸುತ್ತಮುತ್ತಲೂ 500ಕ್ಕೂ ಹೆಚ್ಚು ಪೊಲೀಸರು, ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೋಲೋ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್‌ವರೆಗೆ, ಸಾಯಿರಾಂ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್‌ವರೆಗೆ ಹಾಗೂ ಗುರಪ್ಪನಪಾಳ್ಯ ಜಂಕ್ಷನ್‌ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್‌ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ರಸ್ತೆಗಳಲ್ಲಿ ಸಂಚರಿಸುವವರು ಪರ್ಯಾಯವಾಗಿ ಡೈರಿ ಸರ್ಕಲ್ ಕಡೆಯಿಂದ ತಿಲಕ್ ನಗರ, ಸ್ವಾಗತ್ ಜಂಕ್ಷನ್, ಜಯನಗರ ಈಸ್ಟ್ ಎಂಡ್ ಮೂಲಕ ಜಯದೇವ ಕಡೆ ತಲುಪಲು ಸೂಚಿಸಲಾಗಿದೆ. ಅದೇ ರೀತಿ ಬನ್ನೇರುಘಟ್ಟ ರಸ್ತೆಯಿಂದ ಬರುವ ವಾಹನಗಳು ಜೇಡಿಮರ ಜಂಕ್ಷನ್, ಜಯದೇವ, ಈಸ್ಟ್ ಎಂಡ್, ಸ್ವಾಗತ್ ಜಂಕ್ಷನ್ ಮೂಲಕ ಡೈರಿ ಸರ್ಕಲ್ ತಲುಪಲು ಸೂಚಿಸಲಾಗಿದೆ.
ಪೂರ್ವ ವಿಭಾಗದ ನಾಗವಾರ ಪಾಟರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿಯಾಗಿ ನಾಗವಾರ ಕಡೆಯಿಂದ ಬರುವ ವಾಹನಗಳು ಹೆಣ್ಣೂರು ಜಂಕ್ಷನ್, ಕಾಚರಕನಹಳ್ಳಿ, ಲಿಂಗರಾಜಪುರಂ, ಪುಲಕೇಶಿನಗರ ಪೊಲೀಸ್ ಠಾಣೆ, ಹೇನ್ಸ್ ರಸ್ತೆ ಮೂಲಕ ಸಂಚಾರ ಮಾಡಲು ಸೂಚಿಸಲಾಗಿದೆ. ಶಿವಾಜಿನಗರ ಕಡೆಯಿಂದ ಸಂಚರಿಸುವ ವಾಹನಗಳು ಸ್ಪೆನ್ಸರ್ ರಸ್ತೆ, ಕೋಲ್ಸ್ ರಸ್ತೆ, ವೀಲರ್ಸ್ ರಸ್ತೆ ಮೂಲಕ ನಾಗವಾರ, ಬಾಣಸವಾಡಿ ಕಡೆಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಚಾರ ನಿರ್ಬಂಧವಿರಲಿದೆ.