ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಭರ್ಜರಿ ರಂಗೇರಿದೆ. ಬಿಜೆಪಿಯ ಹೆಚ್ಚುವರಿ ಮತಗಳ ಗ್ಯಾರಂಟಿಯೊಂದಿಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಗೆಲ್ಲಲು ಬೇಕಾಗಿರುವ ಮತ ಗಳಿಸಲು ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರಿಗೆ ಗಾಳ ಹಾಕಿದೆ.
ಈ ಮೂಲಕ ಈ ಚುನಾವಣೆಯಲ್ಲಿ ಶಾಸಕರ ಕುದುರೆ ವ್ಯಾಪಾರದ ಸುದ್ದಿ ಬಹಿರಂಗಗೊಂಡಿದೆ. ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳುವ ಹಟಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಗೌಡ ಮತ್ತು ಜನಾರ್ಧನ ರೆಡ್ಡಿ ಅವರನ್ನು ಸಂಪರ್ಕಿಸಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಇದಷ್ಟೇ ಅಲ್ಲದೆ ಆಡಳಿತ ರೂಡ ಕಾಂಗ್ರೆಸ್‌ನ ಕೆಲವು ಶಾಸಕರನ್ನು ಸಂಪರ್ಕಿಸಿ ಅವರಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡುವ ಮೂಲಕ ಜೆಡಿಎಸ್ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದ್ದು ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ವಾತಾವರಣ ಸೃಷ್ಟಿಯಾಗುವಂತಾಗಿದೆ.
ನಾಮಪತ್ರ ವಾಪಸ್ ಪಡೆಯಲು ನಾಳೆ ಕೊನೆಯ ದಿನವಾಗಿದ್ದು ಅಗತ್ಯ ಶಾಸಕರ ಬೆಂಬಲ ಇಲ್ಲದೆ ಹೋದರೂ ಜೆಡಿಎಸ್ ಅಭ್ಯರ್ಥಿ ಕಣದಲ್ಲೇ ಉಳಿಯುವ ನಿರ್ಧಾರ ಮಾಡುವ ಮೂಲಕ ಶಾಸಕರ ಕುದುರೆ ವ್ಯಾಪಾರದ ಬಿಸಿ ಉಂಟಾಗಿದೆ.
ಈ ನಡುವೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, “ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ” ಎಂದು ಆರೋಪಿಸಿದ್ದಾರೆ.
“ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ. ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದು ಹೇಳಿದರು.
“ಮತದಾರರು ನಮಗೆ 136 ಸೀಟುಗಳನ್ನು ನೀಡಿದ್ದಾರೆ. 2 ಕ್ಷೇತ್ರದ ಪಕ್ಷೇತರರು ನಮ್ಮ ಜತೆಗಿದ್ದಾರೆ. ನಮ್ಮ ಜತೆ ಇರುವ ಬೇರೆಯವರ ಬಗ್ಗೆ ಈಗ ಮಾತನಾಡುವುದಿಲ್ಲ. ಮತದಾನದ ನಂತರ ಮಾತನಾಡುತ್ತೇವೆ” ಎಂದು ತಿಳಿಸಿದರು.
“ಸೋಮಶೇಖರ್ ಹಾಗೂ ಗೋಪಾಲಯ್ಯ ಅವರು ಬಿಜೆಪಿಯಲ್ಲಿದ್ದರೂ ಅವರ ಜತೆ ವೈಯಕ್ತಿಕ ಸ್ನೇಹ, ಸಂಬಂಧಗಳಿವೆ. ಸೋಮಶೇಖರ್ ಅವರು ಕೇವಲ ಮೂರು ವರ್ಷ ಮಾತ್ರ ಬೇರೆ ಕಡೆ ಹೋಗಿದ್ದಾರೆ. ಆದರೆ 35 ವರ್ಷಗಳಿಂದ ನಾವು ರಾಜಕೀಯವಾಗಿ ಸಂಸಾರ ಮಾಡಿದ್ದೇವೆ” ಎಂದು ತಿಳಿಸಿದರು.