ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ 1986ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ನೇಮಕವಾಗಿದ್ದಾರೆ.
ಈ ಸಂಬಂಧ ರಾಜ್ಯಪಾಲರ ಹೆಸರಿನಲ್ಲಿ ಸರ್ಕಾರ ಮಂಗಳವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ನವೆಂಬರ್ 30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಅದೇ ದಿನ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ರಜನೀಶ್ ಗೋಯಲ್ ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.
ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಗಳಾದ ವಿ.ಮಂಜುಳ, ಅಜಯ್ ಸೇಠ್, ಡಾ.ಇ.ವಿ.ರಮಣರೆಡ್ಡಿ, ಅನಿಲ್‍ಕುಮಾರ್ ಝಾ ಜೇಷ್ಠತಾ ಪಟ್ಟಿಯಲ್ಲಿದ್ದರು. ಆದರೆ ಸರ್ಕಾರ ರಜನೀಶ್ ಗೋಯಲ್ ಅವರ ಕುರಿತು ಒಲವು ಹೊಂದಿದ್ದು, ನೇಮಕ ಮಾಡಿ ಆದೇಶ ಹೊರಡಿಸಿದೆ.
ಮುಂದಿನ 8 ತಿಂಗಳ ಅವಧಿಗೆ ನೇಮಕ
ನಾನಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿರುವ ರಜನೀಶ್ ಗೋಯಲ್ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಗೋಯಲ್ ಅವರಿಗೆ ಇನ್ನು ಎಂಟು ತಿಂಗಳ ಸೇವಾವಧಿ ಬಾಕಿಯಿದೆ. ಹಾಗಾಗಿ ಮುಂದಿನ ಜುಲೈ ಅಂತ್ಯದ ವರೆಗೆ ಮುಖ್ಯ ಕಾರ್ಯದರ್ಶಿಯಾಗಿ ಅವರು ಕಾರ್ಯ ನಿರ್ವಹಿಸಬಹುದಾಗಿದೆ.
ಇನ್ನು ಈ ನೇಮಕ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಗೋಯಲ್ ಕೃತಜ್ಞತೆ ಸಲ್ಲಿಸಿದರು. ಸಿಎಂ ಶುಭ ಹಾರೈಸಿದರು.
ಪತ್ನಿಯೂ ಐಎಎಸ್ ಸೇವೆ
ಸಾರ್ವಜನಿಕ ಆಡಳಿತದಲ್ಲಿ ಡಾಕ್ಟರೇಟ್ ಪಡೆದಿರುವ ರಜನೀಶ್ ಗೋಯಲ್ ಅವರು 1986ರ ಆ.25ರಂದು ಐಎಎಸ್ ಸೇವೆಗೆ ಸೇರ್ಪಡೆಯಾದರು. ಇವರ ಪತ್ನಿ ಶಾಲಿನಿ ರಜನೀಶ್ ಕೂಡ ಪ್ರಸ್ತುತ ಐಎಎಸ್ ಅಧಿಕಾರಿಯಾಗಿದ್ದಾರೆ.
ಮುಖ್ಯಮಂತ್ರಿಗಳ ಆಶಯದಿಂದ ನೇಮಕ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳಲಿರುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು. ಅವರ ಇಚ್ಛೆಯಂತೆಯೇ ನೇಮಕವಾಗಿದೆ.