Homeಕರ್ನಾಟಕರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರು, ಸಿಎಂ ಜೊತೆ ಚರ್ಚಿಸಿ ಆದೇಶ: ಸಚಿವ ಪರಮೇಶ್ವರ್

ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರು, ಸಿಎಂ ಜೊತೆ ಚರ್ಚಿಸಿ ಆದೇಶ: ಸಚಿವ ಪರಮೇಶ್ವರ್

ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿಯವರ ಹೆಸರಿಡುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿತ್ತು. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆಗೆ ಮಾತನಾಡಿ, ಅವರ ಒಪ್ಪಿಗೆ ಪಡೆದು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು‌.

ಸಿದ್ಧಗಂಗ ಮಠಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ಸಿದ್ಧಲಿಂಗೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದು, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

“ಮುಂದಿನ ದಿನಗಳಲ್ಲಿ ತುಮಕೂರು ರೈಲ್ವೇ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ. ಅದು‌ ನಾವು ಅವರಿಗೆ ಕೊಡುವ ಗೌರವ. ಈ ಬಗ್ಗೆ ಸೋಮಣ್ಣನವರು ಒತ್ತಾಯ ಮಾಡಿದ್ದರು. ಈಗಾಗಲೇ ರೈಲ್ವೆ ಇಲಾಖೆಯಿಂದ ಕೇಂದ್ರದಲ್ಲಿ ಮಂಜೂರು ಮಾಡಿಸಿದ್ದಾರೆ. ಶ್ರೀಗಳ ಹೆಸರಿಡಲು ತಡವಾಗಿಲ್ಲ. ಸರ್ಕಾರದಲ್ಲಿ ಕೆಲವು ಪ್ರಕ್ರಿಯೆಗಳು ಇರುತ್ತವೆ. ರಸ್ತೆ, ವೃತ್ತ, ಕಟ್ಟಡಕ್ಕೆ ಹೆಸರಿಡಬೇಕಾದರೆ ಪ್ರಸ್ತಾವನೆಗಳು ಬಂದಾಗ ಪರಿಶೀಲನೆ ಮಾಡಿ, ಸಾಧಕ ಭಾದಕಗಳನ್ನ ನೋಡಿ ಸರ್ಕಾರ ಅನುಮತಿ ಕೊಡುತ್ತದೆ” ಎಂದರು.

“ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆಗೆ ಬರಲು ಆಗಿರಲಿಲ್ಲ. ಇವತ್ತು ಸ್ವಾಮೀಜಿಗೆ ಗೌರವ ಸಮರ್ಪಣೆ ಮಾಡಲು ಬಂದಿದ್ದೇನೆ. ಸಿದ್ದಲಿಂಗಸ್ವಾಮೀಜಿಗೆ ನಮನ ಸಲ್ಲಿಸಿದ್ದೇನೆ. ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭವ ಸಂಬಂಧವಿದೆ. ನಮ್ಮ ತಂದೆ ಹಾಗೂ ಹಿರಿಯ ಸ್ವಾಮೀಜಿಯವರ ಜೊತೆಗೆ ಇದ್ದಂತಹ ಸಂಬಂಧ ಯಾವಾಗಲೂ ಇರುತ್ತದೆ. ಈ ಸಂಬಂಧವನ್ನು ನಾವು ಮುನ್ನಡೆಸಿಕೊಂಡು ಹೋಗುತ್ತೇವೆ” ಎಂದು ಹೇಳಿದರು.

“ಹೆಸರಿಡಲು ತಡವಾಗಿಲ್ಲ. ಸರ್ಕಾರದಲ್ಲಿ ಕೆಲವು ಪ್ರಕ್ರಿಯೆಗಳು ಇರುತ್ತದೆ. ರಸ್ತೆ, ವೃತ್ತ, ಕಟ್ಟಡಕ್ಕೆ ಹೆಸರಿಡಬೇಕಾದರೆ ಪ್ರಸ್ತಾವನೆಗಳು ಬಂದಾಗ ಪರಿಶೀಲನೆ ಮಾಡಿ, ಸಾಧಕ ಭಾದಕಗಳನ್ನ ನೋಡಿ ಸರ್ಕಾರ ಅನುಮತಿ ಕೊಡುತ್ತದೆ.”‌ ಎಂದರು.

“ಭದ್ರಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಎರಡು ವರ್ಷದ ಹಿಂದೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 5300 ಕೋಟಿ ರೂ. ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದರು. ನಾವೆಲ್ಲ ಬಹಳ ಸಂತೋಷದಲ್ಲಿ ಇದ್ದೆವು. ಈ ಬಹಳ ದೊಡ್ಡ ಯೋಜನೆ, ಬಹಳ ತಾಲ್ಲೂಕುಗಳಿಗೆ ಅನುಕೂಲವಾಗಲಿದೆ. ಕಾರಣಾಂತರಗಳಿಂದ ಹಣ ಅವರು ಕೊಡಲು ಆಗಿರಲಿಲ್ಲ. ಆದರು ಯೋಜನೆ ನಿಲ್ಲುವಂತಿಲ್ಲ. ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಬೇಕು ಅಂತ ಮುಂದಾಗಿದ್ದೇವೆ. ಕೆಲ ಕಡೆ ಅರಣ್ಯ ಬರುವುದರಿಂದ ತಡವಾಗಿದೆ” ಎಂದು ತಿಳಿಸಿದರು.

“ಮಧುಗಿರಿ‌ಯ ಕೆಲ ಭಾಗಕ್ಕೆ ನೀರು ಬರಲಿದೆ. ಪಾವಗಡಕ್ಕೆ ಈಗಾಗಲೇ ನೀರು ಬರುತ್ತಿದೆ. 2300 ಕೋಟಿ ರೂ. ಕುಡಿಯುವ ನೀರಿನ ಯೋಜನೆ ಮಾಡಿದ್ದೆವು. ಚಳ್ಳಕೆರೆ, ಕೂಡ್ಲಿಗಿ, ಹಿರಿಯೂರು ಎಲ್ಲಾ ಕಡೆಗೂ ನೀರು ಬರುತ್ತದೆ. ಪಾವಗಡಕ್ಕೆ ಈಗಾಗಲೇ 328 ಹಳ್ಳಿಗಳ ಪೈಕಿ 270 ಹಳ್ಳಿಗಳಿಗೆ ನೀರು ಕೊಡುತ್ತಿದ್ದೇವೆ. ಮುಖ್ಯಮಂತ್ರಿಯವರು ಸದ್ಯದಲ್ಲೇ ಉದ್ಘಾಟನೆ ಮಾಡಲಿದ್ದಾರೆ” ಎಂದು ಹೇಳಿದರು.

“ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವಿದೆಯೋ ಅಷ್ಟು ಹಣ ನೀಡುತ್ತಿದ್ದೇವೆ. ಬರುವ ಜೂನ್‌ ವೇಳೆಗೆ ಅರಸಿಕೆರೆಗೆ ನೀರು ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಎರಡು-ಮೂರು ಕಡೆ ಅರಣ್ಯ ಭೂಮಿಯಿಂದ ಸಮಸ್ಯೆಯಾಗಿದೆ. ಅದು ಬಗೆಹರಿದರೆ 2026ರ ಜೂನ್‌ಗೆ ತುಮಕೂರಿಗೆ ಎತ್ತಿನಹೊಳೆ ನೀರು ಬರುತ್ತದೆ. ಮುಂದೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹೋಗುತ್ತದೆ” ಎಂದರು.

“ಸದ್ಯ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಬುಗಡನಹಳ್ಳಿ ಕೆರೆಯಲ್ಲಿ ಶೇಖರಣೆ ಮಾಡಿರುವ ನೀರು ಜೂನ್, ಜುಲೈ ತಿಂಗಳವರೆಗೆ ಆಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಮೇ ತಿಂಗಳಲ್ಲಿ ಹೇಮಾವತಿಯಿಂದ ಎರಡು ಟಿಎಂಸಿ ನೀರು ಬಿಡಿಸುವಂತೆ ಹಾಸನ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರ ಜೊತೆಗೆ ಮಾತನಾಡುತ್ತೇನೆ‌” ಎಂದು ತಿಳಿಸಿದರು.

“ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದ ಕುರಿತು ಮಾತನಾಡಿ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಸೇರಿ 35 ಜನ ಶಾಸಕರು ಬರೆದಿರುವ ಪತ್ರವನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಶಿರಾ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ನಮಗೆ ಸಂತೋಷವಾಗುತ್ತೆ. ಈಗಾಗಲೇ ಎರಡು ಕಡೆ ಸರ್ವೆ ಮಾಡಿದ್ದಾರೆ. ಒಂದು ನೆಲಮಂಗಲ, ಕನಕಪುರ ಭಾಗದಲ್ಲಿ ಸರ್ವೆ ಆಗಿದೆ. ವಿಮಾನ ನಿಲ್ದಾಣ ಮಾಡಲು ಅವರದ್ದೇ ಆದ ಮಾನದಂಡಗಳಿರುತ್ತವೆ. ಅದರಂತೆಯೇ ಶಿಫಾರಸ್ಸು ಮಾಡುತ್ತಾರೆ. ಶಿರಾಗೆ ಸರ್ವೆ ಮಾಡಲು ಬಂದಿಲ್ಲ. ಇದಕ್ಕೆ ಪರಿಗಣಿಸಿದರೆ ಬಹಳ ಅನುಕೂಲವಾಗಲಿದೆ. ತುಮಕೂರು ಜಿಲ್ಲೆಯ ವಸಂತನರಸಾಪುರ, ಶಿರಾ ಭಾಗದಲ್ಲಿ ಎಲ್ಲಿಯೇ ವಿಮಾನ ನಿಲ್ದಾಣವಾದರೆ ಸುಮಾರು 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ವಿಮಾನ ನಿಲ್ದಾಣ ಯೋಜನೆಯನ್ನು ಯಾರು ಹೈಜಾಕ್ ಮಾಡಲು ಆಗುವುದಿಲ್ಲ. ತಾಂತ್ರಿಕ ಸಾಧ್ಯತೆಗಳ ಮೇಲೆ ನಿರ್ಮಿಸಲಾಗುತ್ತದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments