ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ನನ್ನ ಹೇಳಿಕೆ ತಿರುಚಿ ಅದರಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದು, ಬಿಜೆಪಿಯವರ ರಾಜಕೀಯ ದಾರಿದ್ರ್ಯ ಎತ್ತಿ ತೋರಿಸುತ್ತದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, “ಚನ್ನಪಟ್ಟಣ ಉಪಚುನಾವಣೆ ಪ್ರಚಾರದಲ್ಲಿ ನಾನು ಒಕ್ಕಲಿಗರನ್ನು -ಹಿಂದುಗಳನ್ನು ಖರೀದಿಸುತ್ತೇನೆ ಎಂದು ಹೇಳಿರುವುದಾಗಿ ಅಶೋಕ್ ಅವರು ಅಪ ಪ್ರಚಾರ ಮಾಡುತ್ತಿರುವುದು
ಅವರ ಹುದ್ದೆಯ ಘನತೆಗೆ ಶೋಭೆ ತರುವುದಿಲ್ಲ. ನಾನು ಆ ರೀತಿಯ ಪದವನ್ನು ಬಳಸಿಯೇ ಇಲ್ಲ, ಇದು ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.
“ಮುಸ್ಲಿಂ ಮತ ಬೇಡ ಎನ್ನುವ ಕುಮಾರಸ್ವಾಮಿ ಅವರು ಹಣ ಕೊಟ್ಟು ನಮ್ಮ ಸಮುದಾಯದ ಮತ ಖರೀದಿಗೆ ಮುಂದಾಗಿರುವ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಬೇಕಾದರೆ ನಮ್ಮ ಸಮುದಾಯವೇ ಪೈಸೆ ಪೈಸೆ ಹಣ ಸೇರಿಸಿ ನಿಮಗೆ ಕೊಡುತ್ತದೆ, ನಾವು ಖರೀದಿ ಆಗಲ್ಲ ಎಂದು ಹೇಳಿದ್ದೆ. ಅದು ಕುಮಾರಸ್ವಾಮಿಗೆ ಸೀಮಿತ. ಒಕ್ಕಲಿಗ ಸಮುದಾಯ ಅಥವಾ ಹಿಂದೂ ಪದ ಬಳಸಿಯೇ ಇಲ್ಲ. ಆದರೆ ಅಶೋಕ್ ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ.
ಆರ್ ಅಶೋಕ್ ಅವರೇ, “ನಾನು ರೈತನ ಮಗ. ದೇವೇಗೌಡರು ನನ್ನ ರಾಜಕೀಯ ಗುರುಗಳು. ಅವರ ಬಗ್ಗೆ ಅಪಾರ ಗೌರವ ಇದೆ. ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ ಆಮೇಲೆ ಮುಸ್ಲಿಂ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ಪ್ರತಿ ವಿಚಾರದಲ್ಲಿ ರಾಜಕೀಯ ಮಾಡುವ ನಿಮ್ಮ ಬಗ್ಗೆ ಕನಿಕರ ಇದೆ” ಎಂದು ಹೇಳಿದ್ದಾರೆ.