Homeಕರ್ನಾಟಕಬಸ್‌ ಟಿಕೆಟ್‌ ದರ ಏರಿಕೆ ಖಂಡಿಸಿ ಆರ್‌ ಅಶೋಕ್‌ ವಿಭಿನ್ನ ಪ್ರತಿಭಟನೆ

ಬಸ್‌ ಟಿಕೆಟ್‌ ದರ ಏರಿಕೆ ಖಂಡಿಸಿ ಆರ್‌ ಅಶೋಕ್‌ ವಿಭಿನ್ನ ಪ್ರತಿಭಟನೆ

ಕಾಂಗ್ರೆಸ್‌ ಸರ್ಕಾರ ಮಾಡಿರುವ ಬಸ್‌ ಟಿಕೆಟ್‌ ದರ ಏರಿಕೆಯನ್ನು ಖಂಡಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಮೆಜೆಸ್ಟಿಕ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದರು. ಬಸ್‌ ಪ್ರಯಾಣಿಕರ ಕೈಗೆ ಹೂ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರ ಪರವಾಗಿ ಕ್ಷಮೆ ಯಾಚಿಸಿದರು.

ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ ಹೋದ ಆರ್‌.ಅಶೋಕ್ ಹಾಗೂ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, “ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲವೆಂದು ನೀವು ಮತ ನೀಡಿದ್ದೀರಿ. ಆದರೆ ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷದಂದೇ ಟಿಕೆಟ್‌ ದರ ಏರಿಕೆ ಮಾಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ” ಎಂದು ಪ್ರಯಾಣಿಕರಿಗೆ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿಮ್ಮ ಕಾಲಿಗೆ ಬೀಳುತ್ತೇವೆ, ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯನವರ ಹೊಸ ಸ್ಲೋಗನ್. ಟಿಕೆಟ್ ದರ 200-300 ರೂಪಾಯಿ ಜಾಸ್ತಿಯಾಗಿದೆ. ಬಸ್‌ಗಳ ಟಿಕೆಟ್ ದರ ಮಾತ್ರ ಅಲ್ಲ, ಮುಂದೆ ಹಾಲಿನ ದರವನ್ನೂ ಏರಿಕೆ ಮಾಡುತ್ತೇವೆ. ನೀರಿನ ದರವನ್ನು ಏರಿಕೆ ಮಾಡುತ್ತೇವೆ, ಎಲ್ಲ ವಸ್ತುಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಸುವ ಶಪಥವನ್ನು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಪರವಾಗಿ ನಾನು ಹೇಳಿದ್ದೇನೆ. ಈಗ ಪ್ರಯಾಣಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಪತ್ನಿಗೆ ಉಚಿತ ಟಿಕೆಟ್ ನೀಡಿ ಪತಿಗೆ ಡಬಲ್ ಚಾರ್ಜ್ ಮಾಡಿದರೆ ನಮ್ಮ ಮನೆ ದುಡ್ಡೇ ಖರ್ಚಾಗೋದು ಅಲ್ವಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. 2025 ರಲ್ಲಿ ಎಲ್ಲ ತೆರಿಗೆ ಜಾಸ್ತಿ ಮಾಡುತ್ತೇವೆ. ನಿಮ್ಮ ಕಾಲಿಗೆ ಬೀಳುತ್ತೇವೆ. ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಹೊಸ ಸ್ಲೋಗನ್” ಎಂದು ಲೇವಡಿ ಮಾಡಿದರು.

“ಹಿಂದಿನ ಬಿಜೆಪಿ ಸರ್ಕಾರ ಯಾವುದನ್ನೂ ಉಚಿತವಾಗಿ ಕೊಟ್ಟಿರಲಿಲ್ಲ. ಆದರೆ ಈ ಸರ್ಕಾರ ಚುನಾವಣೆಗೂ ಮುನ್ನ ಉಚಿತವಾಗಿ ಕೊಡುತ್ತೇವೆಂದು ಹೇಳಿ ನಂತರ ಪೆಟ್ರೋಲ್, ಡಿಸೇಲ್ ದರ ಏರಿಸಿದೆ. ಮಕ್ಕಳು ಕುಡಿಯುವ ಹಾಲಿಗೂ ಕಲ್ಲು ಹಾಕಿದ್ದಾರೆ. ಮದ್ಯದ ದರ 50 ರೂಪಾಯಿ ಏರಿಕೆ ಮಾಡಿದ್ದಾರೆ. ಸ್ಟ್ಯಾಂಪ್ ಕಾಗದ ದರ, ಮನೆ ತೆರಿಗೆ, ವಿದ್ಯುತ್ ದರ ಏರಿಸಿದ್ದಾರೆ. ಮಾಧ್ಯಮದವರು ಕೂಗಾಡಿದರೂ ನಾನು ನೀರಿನ ತೆರಿಗೆ ಜಾಸ್ತಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ” ಎಂದರು.

“ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಹೊಸ ವರ್ಷಕ್ಕೆ ಗಿಫ್ಟ್ ಕೊಟ್ಟಿದ್ದಾರೆ. ಹಾಗೆಯೇ ಸಿಎಂ ಸಿದ್ದರಾಮಯ್ಯ ಕೂಡ ಕರ್ನಾಟಕದ ಜನತೆಗೆ ಬಸ್ ದರ ಏರಿಕೆಯ ಗಿಫ್ಟ್‌ ನೀಡಿದ್ದಾರೆ. ಇಂತಹ ಸಾರಿಗೆ ಸಚಿವರನ್ನು ನಾವು ನೋಡಲು ಸಾಧ್ಯವೇ ಇಲ್ಲ. ಹತ್ತು ವರ್ಷಗಳಿಂದ ಟಿಎ, ಡಿಎ ಜಾಸ್ತಿಯಾಗಿಲ್ಲವೇ? ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿಲ್ಲವೇ? ಹಾಗಾದರೆ ಹಿಂದಿನ ಬಿಜೆಪಿ ಸರ್ಕಾರ ಯಾಕೆ ದರ ಏರಿಕೆ ಮಾಡಿಲ್ಲ? 2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದೆ. ನಾನು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿಗೆ 1 ಸಾವಿರ ಕೋಟಿ ರೂ.ಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ. ಕೋವಿಡ್‌ ಸಮಯದಲ್ಲಿ ಬಸ್‌ ಸಂಚಾರ ಇರಲಿಲ್ಲವಾದ್ದರಿಂದ ನಷ್ಟವಾಗಿತ್ತು. ಆದರೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನೌಕರರ ಸಂಬಳ ಹೆಚ್ಚ ಮಾಡಲೇಬೇಕು. ನಾನು ಇದ್ದಾಗಲೂ ಸಂಬಳ ಹೆಚ್ಚು ಮಾಡಿಸಿದ್ದೆ. ಆದರೆ ಈಗಿನ ಸರ್ಕಾರ ಸಾಲ ಮಾಡಿ ಆ ಹೊರೆಯನ್ನು ಜನರ ಮೇಲೆ ಹೇರುವುದು ಎಷ್ಟು ಸರಿ” ಎಂದು ಪ್ರಶ್ನೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments