Homeಕರ್ನಾಟಕಕ್ವಿನ್ ಸಿಟಿ‌ | ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರಕ್ಕೆ...

ಕ್ವಿನ್ ಸಿಟಿ‌ | ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರಕ್ಕೆ ಎಂ ಬಿ ಪಾಟೀಲ್‌ ಪತ್ರ

ರಾಜ್ಯದಲ್ಲಿ ಔಷಧ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರಕಾರವು ಒಂದು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು (ನೈಪರ್) ಮಂಜೂರು ಮಾಡಬೇಕಾದ ಜರೂರಿದೆ. ಈ ಕೇಂದ್ರಕ್ಕೆ ಉದ್ದೇಶಿತ ಕ್ವಿನ್ ಸಿಟಿಯಲ್ಲಿ ಸ್ಥಳಾವಕಾಶ ಮಾಡಿಕೊಡಲು ಸರಕಾರ ಮುಕ್ತ ಮನಸ್ಸನ್ನು ಹೊಂದಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಚರ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಸೋಮವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಔಷಧ ಮತ್ತು ಬಯೋಟೆಕ್ ತಯಾರಿಕಾ ಕಂಪನಿಗಳ ಮುಖ್ಯಸ್ಥರ ಜತೆಗಿ‌ನ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಫಾರ್ಮಾ ಕಂಪನಿಗಳ ಸಲಹೆ ಮೇರೆಗೆ ಸಚಿವರು ಈ ವಿಷಯ ತಿಳಿಸಿದರು. ಕರ್ನಾಟಕದಲ್ಲಿ ಇರುವ ಉತ್ತಮ ಫಾರ್ಮಾ ಕಾರ್ಯಪರಿಸರದಿಂದಾಗಿ ಕೇವಲ‌ ನೆರೆ ರಾಜ್ಯಗಳೊಂದಿಗೆ ಸ್ಪರ್ಧೆ ಅಷ್ಟೇ ಅಲ್ಲ ಚೀನಾ ಜತೆಗೂ ಮಾಡಬಹುದಾಗಿದೆ ಎಂದು ಅನೇಕ ಉದ್ಯಮಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೂಡಿಕೆ ಮಾಡುವ ಸಂಸ್ಥೆಗಳಿಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದ ಕಡೆಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಚೆನ್ನೈ- ಬೆಂಗಳೂರು ಬಿಜಿನೆಸ್ ಕಾರಿಡಾರಿನಲ್ಲಿ ತುಮಕೂರಿನಲ್ಲಿ 360 ಎಕರೆ, ವಿಜಯಪುರದ ಮುಳವಾಡ ಹಂತ 1 ಮತ್ತು 2ರಲ್ಲಿ 850 ಎಕರೆ, ಯಾದಗಿರಿ ಜಿಲ್ಲೆಯ ಕಡಚೂರಿನಲ್ಲಿ 763 ಎಕರೆ, ಚಿತ್ರದುರ್ಗದ ಯಟಗುರ್ಕಿಯಲ್ಲಿ 764 ಎಕರೆ ಭೂಮಿ ಅಲ್ಲಿಯ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿದೆ. ಜೊತೆಗೆ ಫಾರ್ಮಾಸುಟಿಕಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿರುವ ಕೋಲಾರದ ಶ್ರೀನಿವಾಸಪುರ ಮತ್ತು ಚಾಮರಾಜನಗರದಲ್ಲಿ ತಲಾ 1,000 ಎಕರೆ ಜಾಗವಿದೆ. ಔಷಧ ತಯಾರಿಕೆ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿ, ತಮ್ಮ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಕೆಲವೆಡೆಗಳಲ್ಲಿ ವಸತಿ, ಶಾಲೆ, ಹೋಟೆಲ್, ಸಂಪರ್ಕ ರಸ್ತೆಗಳು ಇಲ್ಲದಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಉದ್ಯಮಿಗಳು ಬೆಂಗಳೂರಿನಿಂದ ಹೊರಗಿನ ಸ್ಥಳಗಳಲ್ಲಿ ಹೂಡಿಕೆ ಮಾಡಿದರೆ ಆಕರ್ಷಕ ರಿಯಾಯಿತಿಗಳನ್ನು ಕೊಡಲಾಗುವುದು. ಜೊತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿ.ಎ. ನಿವೇಶನಗಳಲ್ಲಿ ವಸತಿ/ಶಾಲೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿ-ಕ್ಯಾಂಪ್ ಮಾದರಿಯಲ್ಲಿ ಶೈಕ್ಷಣಿಕ ಅನುಕೂಲ ಕಲ್ಪಿಸುವುದನ್ನು ಚಿಂತಿಸಲಾಗುವುದು. ಜೊತೆಗೆ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮೋದನೆಗಳನ್ನು ತ್ವರಿತ ಗತಿಯಲ್ಲಿ ನೀಡುವಂತೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಮುಂದಿನ 6 ತಿಂಗಳಲ್ಲಿ ಈ ಬದಲಾವಣೆ ಕಣ್ಣಿಗೆ ಕಾಣಲಿದೆ ಎಂದು ಅವರು ಭರವಸೆ ಕೊಟ್ಟಿದ್ದಾರೆ.

ಔಷಧ ತಯಾರಿಕಾ ಕ್ಷೇತ್ರದಲ್ಲಿ ಈಗ ಕೃತಕ ಬುದ್ಧಿಮತ್ತೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದನ್ನು ಉದಾಸೀನ ಮಾಡಬಾರದು. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಫಾರ್ಮಾ ವಲಯದವರು ಆರು ತಿಂಗಳಿಗೊಮ್ಮೆಯಾದರೂ ಒಂದು ಸಭೆ ನಡೆಸಿ, ಹೊಸ ಆಗುಹೋಗುಗಳಿಗೆ ತೆರೆದುಕೊಳ್ಳಬೇಕು ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಉದ್ಯಮಗಳಿಗೆ 1 ಕಿಲೋ ಲೀಟರ್ ನೀರಿಗೆ ಕೇವಲ 50 ರೂ. ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿ ಇದನ್ನು 120 ರೂ.ಗೆ ಏರಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪನಿಗಳು ಪ್ರತ್ಯೇಕವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಹೊಂದುವ ಬದಲು ಸಾಮೂಹಿಕವಾಗಿ ಮಾಡಿಕೊಂಡರೆ ಮಿತವ್ಯಯ ಸಾಧಿಸಬಹುದು ಎಂದು ಪಾಟೀಲ ಸಲಹೆ ನೀಡಿದ್ದಾರೆ.

ದುಂಡು ಮೇಜಿನ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ನೋವೋ ನಾರ್ಡಿಸ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರೀಯ, ಭಾರತ್ ಬಯೋಟೆಕ್ ಸಿಎಫ್ಒ ಶ್ರೀನಿವಾಸ್, ಕೆಮ್ವೆಲ್ ಬಯೋಫಾರ್ಮಾದ ಸಿಇಒ ಅನಿರಾಗ್ ಬಗಾರಿಯ, ಶಿಲ್ಪಾ ಬಯಲಾಜಿಕಲ್ಸ್ ಸಿಇಒ ಶ್ರೀದೇವಿ ಕಂಬಂಪಾಟಿ, ಬಯೋಕಾನ್ ವತಿಯಿಂದ ಡಾ.ಕೆ ಅನಿಲ್ ಮುಂತಾದವರು ಉಪಸ್ಥಿತರಿದ್ದರು.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments