ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದ ಬಳಿ ಬಿಜೆಪಿ ಪ್ರತಿಭಟನೆ ಮತ್ತು ಪೋಸ್ಟರ್ ಅಭಿಯಾನ ನಡೆಸಿತು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ವೇಳೆ ಮಾತನಾಡಿ, “ತುರ್ತು ಪರಿಸ್ಥಿತಿ ಹೇರಿದ್ದರ ಬಗ್ಗೆ ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಬೇಕು. ತುರ್ತು ಪರಿಸ್ಥಿತಿಯಿಂದ ದೇಶಕ್ಕೆ ದ್ರೋಹ ಬಗೆದಿದ್ದೇವೆ. ಸಂವಿಧಾನಕ್ಕೆ ಅಪಚಾರ ಮಾಡಿದ್ದೇವೆ” ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
“ಕಾಂಗ್ರೆಸ್‌ನವರು ಬಿಜೆಪಿಯೇ ಸಂವಿಧಾನ ಬದಲಿಸುತ್ತಿದೆ ಎಂದು ಹೇಳುತ್ತಾರೆ. ನಾವೇನೂ ಬದಲಾವಣೆ ಮಾಡಿಲ್ಲ. ಮಾಡದೇ ಇದ್ದರೂ ನಮ್ಮ ಮೇಲೆ ಅಪವಾದ ಹೊರಿಸುತ್ತಾರೆ. ಸಂವಿಧಾನಕ್ಕೆ ಅಪಚಾರ ಬಗೆದವರು, ದ್ರೋಹ ಬಗೆದವರು ಕಾಂಗ್ರೆಸ್ಸಿಗರು” ಎಂದು ಟೀಕಿಸಿದರು.
“ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ರಾಮಲೀಲಾ ಮೈದಾನಕ್ಕೆ ಬಂದು ದೇಶದ ಮುಂದೆ ತಲೆಬಾಗಿ ನಿಂತು, ದೇಶದ ಜನರ ಮುಂದೆ ತಲೆಬಗ್ಗಿಸಿ, ನಾವು ಸಂವಿಧಾನಕ್ಕೆ ಅಪಚಾರ ಮಾಡಿದ್ದಾಗಿ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.
“ತುರ್ತು ಪರಿಸ್ಥಿತಿಯಲ್ಲಿ ನನ್ನನ್ನು ಬಂಧಿಯಾಗಿ ಮಾಡಿದ್ದ ಬ್ಯಾರಕ್ ಇನ್ನೂ ಉಳಿದಿದೆ. ಅಲ್ಲಿಂದಲೇ ನಾವೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದೇವೆ. ದೇಶದ್ರೋಹಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಎಮರ್ಜೆನ್ಸಿ ಎಂದರೆ ಕರಾಳ ದಿನ” ಎಂದರು.
ಪೋಸ್ಟರ್ ಅಭಿಯಾನದಲ್ಲಿ ಸಿ ಎನ್ ಅಶ್ವಥನಾರಾಯಣ್, ಶಾಸಕ ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ, ಕೇಶವಪ್ರಸಾದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಸೇರಿದಂತೆ ಇತರರು ಇದ್ದರು.