Homeಕರ್ನಾಟಕಯೂರಿಯಾ ಪೂರೈಕೆ ಮಾಡದೇ ರೈತರಿಗೂ ಮೋಸ: ಜೆಡಿಎಸ್‌ ಆರೋಪಿಸಿ ಪ್ರತಿಭಟನೆ

ಯೂರಿಯಾ ಪೂರೈಕೆ ಮಾಡದೇ ರೈತರಿಗೂ ಮೋಸ: ಜೆಡಿಎಸ್‌ ಆರೋಪಿಸಿ ಪ್ರತಿಭಟನೆ

ರಾಜ್ಯ ಕಾಂಗ್ರೆಸ್‌ ಸರಕಾರ ʼಎʼ ಖಾತಾ ʼಬಿʼ ಎಂದು ರಾಜಧಾನಿಯ ಜನರನ್ನು ಒಂದೆಡೆ ವಂಚಿಸುತ್ತಿದ್ದರೆ ಮತ್ತೊಂದು ಕಡೆ ಸಮಯಕ್ಕೆ ಸರಿಯಾಗಿ ಯೂರಿಯಾ ಪೂರೈಕೆ ಮಾಡದೇ ರೈತರಿಗೂ ಮೋಸ ಮಾಡುತ್ತಿದೆ ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ. ಜೆಡಿಎಸ್‌ ನಗರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಹೆಚ್.ಎಂ. ರಮೇಶ್‌ ಗೌಡ ಅವರ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ ಜೆಡಿಎಸ್‌ ಕಾರ್ಯಕರ್ತರು ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರ ಪ್ರತಿಕೃತಿ ದಹನ ಮಾಡಿದರು. ಬಳಿಕ ಖಾತಾ ಬದಲಾವಣೆ ವಂಚನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಬಿಬಿಎಂಪಿಯನ್ನು ಆಗ್ರಹಿಸಿದರು. ಅಲ್ಲದೆ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಅವರಿಗೆ ಮನವಿ ಸಲ್ಲಿಸಿ, ತಕ್ಷಣವೇ ಖಾತ ವಂಚನೆಯನ್ನು ನಿಲ್ಲುಸವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್‌ ಗೌಡ, “ಬಿ ಖಾತಾದಿಂದ ಎ ಖಾತ ಮಾಡುವ ಕ್ರಮಕ್ಕೆ ಕಾನೂನಿನಲ್ಲಿಯೇ ಅವಕಾಶ ಇಲ್ಲ. ಕೇವಲ ಜನರ ಹಣ ಲೂಟಿ ಮಾಡಲಿಕ್ಕಾಗಿಯೇ ಇದನ್ನು ಮಾಡಲಾಗುತ್ತಿದೆ. ಜನರಿಗೆ ಮಂಕುಬೂದಿ ಎರಚಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುವ ಹುನ್ನಾರ ನಡೆಸಲಾಗಿದೆ” ಎಂದು ಆರೋಪ ಮಾಡಿದರು. “ಖಾತಾಗೆ ಬದಲಾವಣೆ ಎನ್ನುವುದೇ ದೊಡ್ಡ ಬೋಗಸ್‌ ಎಂದಿರುವ ಅವರು, ನ್ಯಾಯಾಲಯದಲ್ಲಿ ಈ ಸರಕಾರ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ. ಈ ಹಿಂದೆ ಒಂದು ಚದರ ಮೀಟರಿಗೆ 13,800 ರೂಪಾಯಿ ತೆರಿಗೆಯನ್ನು ಬಿಬಿಎಂಪಿಯಿಂದ ವಿಧಿಸಲಾಗುತ್ತಿತ್ತು. ಕಾಂಗ್ರೆಸ್‌ ಸರಕಾರ ಈ ತೆರಿಗೆಯನ್ನು 1000% ಏರಿಕೆ ಮಾಡಿದೆ. ಅಂದರೆ 3ರಿಂದ 6 ಲಕ್ಷ ರೂಪಾಯಿವರೆಗೂ ಹೆಚ್ಚಿಸಿದೆ. ಜನರಿಂದ ಇಷ್ಟೊಂದು ಹಣ ಕಟ್ಟಲು ಸಾಧ್ಯವೇ” ಎಂದು ಪ್ರಶ್ನಿಸಿದರು. ಸರಕಾರಕ್ಕೆ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಟ “ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಚೆಲ್ಲಾಟವಾಡಿದಂತೆ ಕಾಂಗ್ರೆಸ್‌ ಸರಕಾರವು ರೈತರ ಜತೆಯೂ ಆಟವಾಡುತ್ತಿದೆ. ಉತ್ತಮ ಮಳೆಯಾಗಿ ಬಿತ್ತನೆ ಚಟುವಟಿಕೆ ಆರಂಭವಾಗುವುದಕ್ಕೆ ಸರಿಯಾಗಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ. ಇದಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರೇ ಕಾರಣ. ಈ ಕಾರಣಕ್ಕಾಗಿಯೇ ಅವರ ಪ್ರತಿಕೃತಿ ದಹನ ಮಾಡಿದ್ದೇವೆ” ಎಂದು ರಮೇಶ್‌ ಗೌಡ ದೂರಿದರು. “ಸೊಸೈಟಿಗಳ ಮೂಲಕ ರೈತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ರಸಗೊಬ್ಬರ ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೇವಲ ಗ್ಯಾರಂಟಿಗಳಿಂದ ಜನರಿಗೆ ಟೋಪಿ ಹಾಕುತ್ತಿರುವ ಸರಕಾರ ಅದೇ ಅನ್ನ ಕೊಡುವ ರೈತನಿಗೇ ಮೋಸ ಮಾಡುತ್ತಿದೆ” ಎಂದು ಅವರು ಆರೋಪಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ನಗರದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಷ್ ರಾವ್, ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಟಿ.ತಿಮ್ಮೇಗೌಡ, ಮಾಜಿ ಉಪ ಮಹಾಪೌರ ಶ್ರೀರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಎಂ. ಮುನಿಸ್ವಾಮಿ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಅಧ್ಯಕ್ಷ ಟಿ.ಆರ್. ತುಳಸಿರಾಮ್, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಅಧ್ಯಕ್ಷ ವಿ.ನಾಗೇಶ್ವರರಾವ್, ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಸ್ಯಾಮುಯಲ್ ಇನ್ನಿತರ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments