Homeಕರ್ನಾಟಕಪ್ರೊ. ಮಾಧವ ಗಾಡ್ಗೀಳ್ ಆತ್ಮಕಥೆ ಏರುಘಟ್ಟದ ನಡಿಗೆ ಬಿಡುಗಡೆ

ಪ್ರೊ. ಮಾಧವ ಗಾಡ್ಗೀಳ್ ಆತ್ಮಕಥೆ ಏರುಘಟ್ಟದ ನಡಿಗೆ ಬಿಡುಗಡೆ

ಅದ್ಭುತ ಜೀವವೈವಿಧ್ಯತೆಯ ತಾಣ ಹಾಗೂ ಹಲವು ಪ್ರಮುಖ ನದಿಗಳ ಮೂಲವಾದ ಪಶ್ಚಿಮಘಟ್ಟಗಳ ಮಹತ್ವದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ಪ್ರೊ.ಮಾಧವ ಗಾಡ್ಗೀಳ್ ಅವರ ಆತ್ಮಕತೆ A Walk up the Hill ನ ಕನ್ನಡ ಕೃತಿ ‘ಏರುಘಟ್ಟದ ನಡಿಗೆ’ ಬಿಡುಗಡೆ ಮಾಡಿ ಮಾತನಾಡಿದ ಅವರು, “ಡಾ. ಕಸ್ತೂರಿ ರಂಗನ್ ಸಮಿತಿಯ ವರದಿಯಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶ 20,668 ಚ.ಕಿ.ಮೀ. ಪರಿಸರ ಸೂಕ್ಷ್ಮ ಎಂದು ಗುರುತಿಸಿದೆ. ರಾಜ್ಯ ಈಗಾಗಲೇ 16,114 ಚದರ ಕಿ.ಮೀ. ಸಂರಕ್ಷಿಸಿದ್ದು, ಕಸ್ತೂರಿ ರಂಗನ್ ವರದಿಯಲ್ಲಿ ನಮೂದಿಸಿರುವ ವ್ಯಾಪ್ತಿಯ ಶೇ. 83ರಷ್ಟು ಆಗಿರುತ್ತದೆ” ಎಂದರು.

“ಉಳಿದ 4 ಸಾವಿರ ಚ.ಕಿ.ಮೀ ಅಂದರೆ ಶೇ. 17ರಷ್ಟು ಪ್ರದೇಶದಲ್ಲಿ 39 ತಾಲೂಕುಗಳ ಸುಮಾರು 1449 ಗ್ರಾಮಗಳಿದ್ದು, ಇಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ, ವಸತಿ ಪ್ರದೇಶಗಳಿವೆ. ಹೀಗಾಗಿ ಜೀವನ, ಜೀವನೋಪಾಯ ಮತ್ತು ಪರಿಸರ ಸಂರಕ್ಷಣೆ ಎಲ್ಲವನ್ನೂ ಸಮತೋಲಿತವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ” ಎಂದು ತಿಳಿಸಿದರು.

“ಇಂದು ಇಡೀ ವಿಶ್ವ, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಂತಹ ಸವಾಲು ಎದುರಿಸುತ್ತಿದೆ. ಋತುಮಾನಗಳಲ್ಲಿ ಭಾರೀ ಬದಲಾವಣೆ ಆಗಿದೆ. ಒಂದು ತಿಂಗಳಲ್ಲಿ ಬೀಳಬೇಕಾದ ಮಳೆ ಒಂದು ವಾರದಲ್ಲಿ, ಒಂದು ವಾರದಲ್ಲಿ ಬೀಳುವ ಮಳೆ ಒಂದು ದಿನ ಅಥವಾ ಒಂದು ಗಂಟೆಯಲ್ಲಿ ಬೀಳುತ್ತಿದೆ. ಇಂತಹ ವೈಪರೀತ್ಯಗಳಿಗೆ ಮಾನವನ ದುರಾಸೆ. ಅರಣ್ಯ ನಾಶ, ಪ್ರಕೃತಿ, ಪರಿಸರದ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯ ಕಾರಣ” ಎಂದರು.

“ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಗುರಿ ಮೀರಿದ ಸಾಧನೆ ಮಾಡಿ 5 ಕೋಟಿ 48 ಲಕ್ಷ ಸಸಿ ನೆಡಲಾಗಿದೆ. 2024-25ರಲ್ಲಿ 3 ಕೋಟಿ ಸಸಿ ನೆಡಲಾಗಿದೆ. ಇವುಗಳ ಪೈಕಿ ಎಷ್ಟು ಬದುಕಿಳಿದಿವೆ ಎಂದು ತಿಳಿಯಲು ಆಡಿಟ್ ಕೂಡ ಮಾಡಿಸಲಾಗಿದೆ. ಈ ವಿವರವನ್ನು ಅರಣ್ಯ ಇಲಾಖೆಯ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ” ಎಂದು ತಿಳಿಸಿದರು.

“ನಮ್ಮ ಪೂರ್ವಿಕರು ಪ್ರಕೃತಿದತ್ತವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸುತ್ತಿದ್ದರು. ಮರುಬಳಕೆಗೆ ಆದ್ಯತೆ ನೀಡುತ್ತಿದ್ದರು. ಆದರೆ ಇಂದು ಇಡೀ ಜಗತ್ತು ನೈಸರ್ಗಿಕ ಸಂಪನ್ಮೂಲವನ್ನು ಮನಸೋಇಚ್ಛೆ ಬಳಕೆ ಮಾಡುತ್ತಿದೆ. ಈ ಭೂಮಿ, ಈ ಭೂಮಿಯಲ್ಲಿರುವ ನೀರು, ಕಾಡು, ಬೆಟ್ಟ, ಗುಡ್ಡ, ಪರ್ವತ, ನದಿ ಇದ್ಯಾವುದೂ ನಮಗೆ ನಮ್ಮ ಪೂರ್ವಿಕರಿಂದ ಬಂದಿರುವ ಪಿತ್ರಾರ್ಜಿತ ಆಸ್ತಿಯಲ್ಲ. ಬದಲಾಗಿ ನಮ್ಮ ಮುಂದಿನ ಪೀಳಿಗೆ ನಮಗೆ ನೀಡಿರುವ ಸಾಲ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದರು.

“ನಾವೆಲ್ಲರೂ ಸಾಮಾನ್ಯವಾಗಿ ಪರಿಸರ ಎಂದರೆ ಮರ, ಗಿಡ, ಕಾಡು, ಮೇಡು, ವನ್ಯಜೀವಿಗಳಿಗಷ್ಟೇ ಸೀಮಿತವಾಗುತ್ತೇವೆ. ಆದರೆ ಪ್ರೊ. ಗಾಡ್ಗೀಳ್ ಅವರು ಪರಿಸರ ವಿಜ್ಞಾನಿಯಾಗಿ ಪರಿಸರವನ್ನು ನೋಡಿರುವ ದೃಷ್ಟಿಕೋನವೇ ಬೇರೆ ಇದೆ. ಅವರು ಪರಿಸರವನ್ನು ಕಲ್ಲು ಮಣ್ಣಿನಿಂದ ಕೂಡಿದ ಭೂಮಿ, ಬೆಟ್ಟ, ಗುಡ್ಡ, ಈ ಭೂಮಿಯಲ್ಲಿ ಬೆಳೆಯುವ ಸಕಲ ಜೀವರಾಶಿ, ಸಸ್ಯ ಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ, ಸೂಕ್ಷ್ಮಾಣು ಜೀವಿಗಳು, ನದಿ ಮೂಲಗಳು, ಅರಣ್ಯವಾಸಿಗಳು, ನಾಗರಿಕತೆಯವರೆಗೆ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಅಧ್ಯಯನ ನಡೆಸಿದವರು. ಹೀಗಾಗಿಯೇ ಇವರಿಗೆ ವಿಶ್ವಸಂಸ್ಥೆ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ನೀಡಿ ಗೌರವಿಸಿದೆ” ಎಂದು ಹೇಳಿದರು.

“ಪಶ್ಚಿಮ ಘಟ್ಟ ಕುರಿತಂತೆ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ 31.08.2011ರಂದು ನೀಡಿರುವ ವರದಿ, ಅವರೆಲ್ಲರೂ ಕೈಗೊಂಡ ಅಧ್ಯಯನ ಪಶ್ಚಿಮಘಟ್ಟದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ವರದಿ ಸಂಪೂರ್ಣವಾಗಿ ಜಾರಿಗೆ ಬಾರದೆ ಇರಬಹುದು. ಆದರೆ 2012ರ ಜುಲೈನಲ್ಲಿ ಪಶ್ಚಿಮಘಟ್ಟವನ್ನು ಸಂರಕ್ಷಿತ ಪ್ರದೇಶ ಎಂದು ಯುನೆಸ್ಕೋ ಘೋಷಿಸಲು ಇದು ಸಹಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಕಳೆದ 20 ತಿಂಗಳುಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 117 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದೆ. ರಾಜ್ಯದಾದ್ಯಂತ 5 ಸಾವಿರ ಎಕರೆ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ತೆರವು ಮಾಡಿಸಲಾದ ಎಲ್ಲ ಅರಣ್ಯ ಭೂಮಿಯಲ್ಲಿ ಗಡಿ ಗುರುತಿಗೆ ಕಂದಕ ತೋಡಿ, ಗಿಡ ನೆಡಲಾಗಿದೆ. ಮತ್ತೆ ಒತ್ತುವರಿ ಆಗದಂತೆ ಎಚ್ಚರ ವಹಿಸಲೂ ಸೂಚಿಸಲಾಗಿದೆ” ಎಂದರು.

ಪ್ರೊ ಗಾಡ್ಗೀಳ್ ಅವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ ಪತ್ರಕರ್ತ, ಪರಿಸರ ಪ್ರೇಮಿ ನಾಗೇಶ್ ಹೆಗಡೆ ಮತ್ತು ಶಾರದಾ ಗೋಪಾಲ ಹಾಗೂ ಈ ಗ್ರಂಥ ಹೊರತಂದಿರುವ ಆಕೃತಿ ಆಶಯ ಪಬ್ಲಿಕೇಷನ್ ಗೆ ಅಭಿನಂದನೆ ಸಲ್ಲಿಸಿದರು.

ಶಿಕ್ಷಣ ತಜ್ಞ ಪ್ರೊ. ಕೆ.ಈ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪತ್ರಕರ್ತ ನಾಗೇಶ್ ಹೆಗಡೆ, ಪರಿಸರ ಚಿಂತಕ ಡಾ. ನರೇಂದ್ರ ರೈ ದೇರ್ಲ, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಆರ್.ಪಿ.ಇ. ಸೊಸೈಟಿ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments