Homeಕರ್ನಾಟಕಜೂ.10ರಂದು ಉತ್ಪಾದನಾ ಮಂಥನ ಸಮಾವೇಶ: ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಜೂ.10ರಂದು ಉತ್ಪಾದನಾ ಮಂಥನ ಸಮಾವೇಶ: ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸುವ ಚಿಂತನ – ಮಂಥನಕ್ಕೆ ವೇದಿಕೆ ಕಲ್ಪಿಸಲಿರುವ ಒಂದು ದಿನದ ʼಉತ್ಪಾದನಾ ಮಂಥನʼ ಸಮಾವೇಶವು ಇದೇ 10ರಂದು (ಮಂಗಳವಾರ) ಬೆಂಗಳೂರಿನಲ್ಲಿ ನಡೆಯಲಿದೆ.

ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸ್ಪಷ್ಟ ಹಾಗೂ ಕಾರ್ಯಸಾಧ್ಯವಾದ ನೀಲನಕ್ಷೆ ರೂಪಿಸುವುದು ʼಉತ್ಪಾದನಾ ಮಂಥನʼದ ಮುಖ್ಯ ಉದ್ದೇಶವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಇಲ್ಲಿ ತಿಳಿಸಿದರು.

ತಾಜ್‌ ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ದಿನಪೂರ್ತಿ ನಡೆಯಲಿರುವ ಸಮಾವೇಶದಲ್ಲಿ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ʼಇದು ಬರೀ ಸಮಾವೇಶ ಆಗಿರುವುದಿಲ್ಲ. ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿರ್ಣಾಯಕ ಹೆಜ್ಜೆಯಾಗಿರಲಿದೆ. ಕೈಗಾರಿಕೆ ಹಾಗೂ ನವೋದ್ಯಮಗಳ ಪರಿಣತರ ಸಲಹೆ ಪಡೆದು ಭವಿಷ್ಯಕ್ಕೆ ಆದ್ಯತೆ ನೀಡುವ, ನಾವೀನ್ಯತೆ ಆಧಾರಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಪರಿಹಾರಗಳನ್ನು ಎಲ್ಲರ ಸಹಯೋಗದಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಪ್ರತಿಯೊಂದು ವಲಯಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಪ್ರತ್ಯೇಕ ಕ್ರಮಗಳು, ಬಂಡವಾಳ ಹೂಡಿಕೆ ಅವಕಾಶಗಳ ಅನಾವರಣ, ಕೈಗಾರಿಕೆಗಳಿಗೆ ಹೆಚ್ಚು ಸೂಕ್ತವಾಗಿರುವ ನೀತಿಗಳನ್ನು ರೂಪಿಸಲು ಈ ಸಮಾವೇಶವು ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ. ತಯಾರಿಕೆ ಹಾಗೂ ರಫ್ತು ವಹಿವಾಟು ಹೆಚ್ಚಿಸುವುದು ಹಾಗೂ ರಾಜ್ಯದಾದ್ಯಂತ ಸುಸ್ಥಿರ ರೀತಿಯಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆʼ ಎಂದು ಪಾಟೀಲ ತಿಳಿಸಿದ್ದಾರೆ.

ʼವೈಮಾಂತರಿಕ್ಷ ಹಾಗೂ ರಕ್ಷಣೆ, ಎಲೆಕ್ಟ್ರಾನಿಕ್ಸ್‌ (ಬಿಡಿಭಾಗಗಳು) ಸೆಮಿಕಂಡಕ್ಟರ್ಸ್‌, ಭಾರಿ ಯಂತ್ರೋಪಕರಣ- ಮಷಿನ್‌ಟೂಲ್ಸ್‌, ರೋಬೊಟಿಕ್ಸ್‌, ವಾಹನ ತಯಾರಿಕೆ / ಬಿಡಿಭಾಗಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳು (ಇವಿ), ಜವಳಿ, ಗ್ರಾಹಕ ಉತ್ಪನ್ನಗಳು (ಎಫ್‌ಎಂಸಿಜಿ, ಪಾದರಕ್ಷೆ ಹಾಗೂ ಆಟಿಕೆ) – ಒಳಗೊಂಡಿರುವ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿನ ರಾಜ್ಯದ ಸಾಧನೆ ಮುನ್ನಡೆಸಲು ಹಮ್ಮಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮ ದಿಗ್ಗಜರು ಈ ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.

ಪ್ರಮುಖ ಕಂಪನಿಗಳಾದ ಕಾಲಿನ್ಸ್‌ ಏರೊಸ್ಪೇಸ್‌, ಮಹೀಂದ್ರಾ ಏರೊಸ್ಪೇಸ್‌, ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌, ಅಪ್ಲೈಡ್‌ ಮಟೇರಿಯಲ್ಸ್‌, ಏರ್‌ ಇಂಡಿಯಾ, ಬಿಐಎಲ್‌ ಸೇರಿದಂತೆ 58 ಕೈಗಾರಿಕೆಗಳು ಹಾಗೂ 10 ನವೋದ್ಯಮಗಳು ಸಮಾವೇಶದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.

ಏರ್‌ ಇಂಡಿಯಾದ ಪ್ರಾಜೆಕ್ಟ್ಸ್‌ ಮುಖ್ಯಸ್ಥ ಜಿತಿನ್‌ ಗುಲಾಟಿ, ಅಲ್ಫಾ ಡಿಸೈನ್ ಟೆಕ್ನಾಲಜೀಸ್ನ ಅಧ್ಯಕ್ಷ ಕರ್ನಲ್ ಎಚ್. ಎಸ್. ಶಂಕರ್, ಬಿಐಎಎಲ್‌-ನ ಸಿಇಒ ಹರಿ ಮಾರಾರ್, ಕಾಲಿನ್ಸ್ ಏರೋಸ್ಪೇಸ್-ನ ಆಪರೇಷನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿನು ಕೃಷ್ಣನ್‌ಕುಟ್ಟಿ, ಮಹೀಂದ್ರಾ ಏರೋಸ್ಪೇಸ್ನ ಸಿಒಒ ಕಾರ್ತಿಕ್ ಕೃಷ್ಣಮೂರ್ತಿ, ಹಿಟಾಚಿ ಎನರ್ಜಿ-ಯ ಸಿಇಒ ವೇಣು ನುಗುರಿ, ಜಿಎಸ್‌ಎಸ್‌ಎಂ ಐಎಫ್‌ಬಿ-ಯ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಸುದಿಪ್ತೊ ಗುಪ್ತಾ, ಬಿಇಎಲ್‌-ನ ಅಧ್ಯಕ್ಷ ಮನೋಜ್ ಜೈನ್, ಟಾಟಾ ಹಿಟಾಚಿ-ಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್, ಬೌನ್ಸ್-ನ ಸಹ-ಸಂಸ್ಥಾಪಕ ಅನಿಲ್ ಜಿ., ಹೋಂಡಾ-ದ ಕಾರ್ಯಾಚರಣೆ ಮುಖ್ಯಸ್ಥ ಸುನಿಲ್ ಮಿತ್ತಲ್, ರಿವೇರ್‌-ನ ತಯಾರಿಕಾ ವಿಭಾಗದ ಮುಖ್ಯಸ್ಥೆ ಮಯೂರಿ ಮೊಹಿಡೇಕರ್, ಟೊಯೋಟಾ-ದ ಹಿರಿಯ ಉಪಾಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ವೋಲ್ವೊ-ದ ಸುಸ್ಥಿರತೆ ವ್ಯವಹಾರಗಳ ನಿರ್ದೇಶಕ ಸೋಹಂಜೀತ್ ರಾಂಧವಾ, ಗೋದ್ರೇಜ್-ನ ತಯಾರಿಕಾ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಶುತೋಷ್ ಪರ್ಮಾರ್, ಗೋಕಲ್‌ದಾಸ್‌ ಎಕ್ಸ್‌ಪೋರ್ಟ್ಸ್‌ನ ಸಿಇಒ ಶಿವರಾಮಕೃಷ್ಣನ್ ಗಣಪತಿ ಮುಂತಾದ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments