ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣ ಸಂಬಂಧ ಈಗಾಗಲೇ ಒಂದು ವಿಡಿಯೋದ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ವರದಿ ಪೊಲೀಸರ ಕೈಸೇರಿದ ಬೆನ್ನಲ್ಲೇ ಮತ್ತಷ್ಟು ವಿಡಿಯೋಗಳನ್ನು ಎಫ್ಎಸ್ಎಲ್ಗೆ ಸಲ್ಲಿಸಲಾಗಿದೆ.
ಘಟನೆಯ ಸಂಬಂಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಇನ್ನಷ್ಟು ವಿಡಿಯೋಗಳನ್ನು ಪರೀಕ್ಷೆಗಾಗಿ ಎಫ್‌ಎಸ್ ಎಲ್ಗೆ ಕಳುಹಿಸಿದ್ದಾರೆ. ಸದ್ಯ ಆಡಿಯೋ ಉಚ್ಚಾರಣೆ ಬಗ್ಗೆ ಪೊಲೀಸರು ಎಫ್ಎಸ್ಎಲ್ನಿಂದ ಮೌಖಿಕ ಮಾಹಿತಿ ಪಡೆದಿದ್ದು, ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಸಂಪೂರ್ಣ ಎಫ್ಎಸ್ಎಲ್ ವರದಿ ಬರಲು ಮತ್ತಷ್ಟು ಸಮಯ ಅಗತ್ಯ ಇದೆ. ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿರುವ ಬಗ್ಗೆ ಧೃಡಪಡಬೇಕು. ಧೃಡ ಆದ ಕೂಡಲೇ ಕೂಗಿದವರು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕೆ ಅಲ್ಲಿದ್ದವರ ಎಲ್ಲರ ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ವಿಧಾನಸೌಧದ ಆಡಿಯೋ ಜೊತೆ ಪೊಲೀಸರು ಸಂಗ್ರಹಿಸಿದ ವಾಯ್ಸ್ ಸ್ಯಾಂಪಲ್ ಅನಾಲಿಸಿಸ್ ನಡೆಸಲಾಗುತ್ತದೆ.
8 ಮಂದಿ ವಿಚಾರಣೆ
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸರು ಇಲ್ಲಿಯವರೆಗೆ 8 ಮಂದಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಏಳು ಮಂದಿಯು ತಾವು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದಿದ್ದಾರೆ.
8 ಮಂದಿ ಐಕಿ ಪೈಕಿ ಮೂವರ ಧ್ವನಿ ಮಾದರಿಯನ್ನು ಪೊಲೀಸರು ಪಡೆದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಗೆ ರವಾನೆ ಮಾಡಲಾಗಿದೆ. ಇನ್ನು ಧ್ವನಿ ಮಾದರಿ ಜೊತೆಗೆ ವಿಡಿಯೋ ತುಣಕನ್ನು ಕಳುಹಿಸಿದ್ದಾರೆ.
“ಪೊಲೀಸರು ಎಲ್ಲ ಮಾಧ್ಯಮಗಳಿಂದ ವಿಡಿಯೋ ತುಣಕುಗಳನ್ನು ಪಡೆದಿದ್ದಾರೆ. ಈ ಎಲ್ಲ ವಿಡಿಯೋಗಳಲ್ಲಿ ಕೇವಲ ಒಂದು ವಿಡಿಯೋ ತುಣುಕನ್ನು ಮಾತ್ರ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ.
26 ಮಂದಿಯ ಪಟ್ಟಿ
ಇನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಮೇಲೆ ವಿಧಾನಸೌಧ ಪೊಲೀಸರು 26 ಮಂದಿಯ ಪಟ್ಟಿ ತಯಾರಿಸಿದ್ದು, ಇನ್ನೂ 19 ಜನರ ವಿಚಾರಣೆ ಬಾಕಿ ಇದೆ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಪಕ್ಕದಲ್ಲಿ ಇದ್ದ ಬೆಂಬಲಿಗ ಬ್ಯಾಡಗಿ ಮೂಲದ ಮೊಹಮ್ಮದ್ ಶಫಿ ನಾಶಿಪುಡಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಬ್ಯಾಡಗಿಗೆ ತೆರಳಿದ್ದ ಪೊಲೀಸರ ತಂಡ, ಮೊಹಮ್ಮೆದ್ ಶಫಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈತನ ಧ್ವನಿ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.