Homeದೇಶಸಂಸದರಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ, ಸಂಸತ್‌ನಲ್ಲಿ ಇನ್ಮುಂದೆ ಅಣ್ಣ-ತಂಗಿ ಅಬ್ಬರ

ಸಂಸದರಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ, ಸಂಸತ್‌ನಲ್ಲಿ ಇನ್ಮುಂದೆ ಅಣ್ಣ-ತಂಗಿ ಅಬ್ಬರ

ಲೋಕಸಭೆಯ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಇಂದು (ನ.28) ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಮೂಲಕ ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಸಂಸತ್ತಿನಲ್ಲಿ ಕುಟುಂಬದ ಮೂವರು ಸದಸ್ಯರು ಒಟ್ಟಿಗೆ ಸೇರಿರುವ ಅಪರೂಪದ ನಿದರ್ಶನದಲ್ಲಿ ತನ್ನ ತಾಯಿ ಸೋನಿಯಾ ಮತ್ತು ಸಹೋದರ ರಾಹುಲ್‌ ಅವರ ಸಮುಖದಲ್ಲಿ ಅವರು ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಹುಲ್‌ ಗಾಂಧಿ ಅವರ ರಾಜೀನಾಮೆ ಬಳಿಕ ತೆರವಾದ ವಯನಾಡ್‌ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡಿದ್ದರು. 6.22 ಲಕ್ಷ ಮತಗಳನ್ನು ಪಡೆಯುವ ಮೂಲಕ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಪ್ರಿಯಾಂಕಾ ಗಾಂಧಿ 2019ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು ಮತ್ತು ನಂತರ ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ವರ್ಷಗಳ ನಂತರ, ಪ್ರಿಯಾಂಕಾ ಗಾಂಧಿ ಅವರು ಚುನಾಯಿತ ಜನಪ್ರತಿನಿಧಿಯಾಗಿ ತಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.

ಸಂಸತ್‌ ಚಳಿಕಾಲದ ಅಧಿವೇಶನವು ಇದೇ ನವೆಂಬರ್‌ 25ರಿಂದ ಆರಂಭವಾಗಿದೆ. ಆರಂಭದಲ್ಲೇ ಮಣಿಪುರ ಮತ್ತು ಸಂಭಾಲ್‌ ಹಿಂಸಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದವು, ಇದರಿಂದ ಕಲಾಪ ಮುಂದೂಡಲಾಯಿತು, 75ನೇ ಸಂವಿಧಾನ ದಿನಾಚರಣೆ ಅಂಗವಾಗಿ 2ನೇ ದಿನವೂ ಯಾವುದೇ ಸಭೆ ನಡೆಯಲಿಲ್ಲ. 3ನೇ ದಿನ ಎರಡೂ ಸದನಗಳನ್ನು ಒಂದು ಗಂಟೆ ಮುಂದೂಡಲಾಯಿತು. ಮುಂದಿನ ಕಲಾಪದಲ್ಲಿ ಅಣ್ಣ-ತಂಗಿ ಅಬ್ಬರಿಸಲಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments