ಮೈಸೂರು ಚಲೋ ಪಾದಯಾತ್ರೆಯಲ್ಲಿ ಹಾಸನ ಬಿಜೆಪಿ ನಾಯಕ ಪ್ರೀತಂ ಗೌಡ ಯಾವುದೇ ಕಾರಣಕ್ಕೂ ಭಾಗಿಯಾಗಬಾರದು ಎಂದು ನೇರವಾಗಿ ಹೇಳಿದ್ದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಮಂಡ್ಯದಲ್ಲೇ ಮುಖಭಂಗವಾಗಿದೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ವೇಳೆ ಜೆಡಿಎಸ್ ಭದ್ರಕೋಟೆ ಎಂದೇ ಖ್ಯಾತಿಯ ಮಂಡ್ಯದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕೇಸರಿ ಶಾಲು ಧರಿಸಿಕೊಂಡು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಐದನೇ ದಿನದ ಪಾದಯಾತ್ರೆ ವೇಳೆ ಮಂಡ್ಯದಲ್ಲಿ ಕಾಣಿಸಿಕೊಂಡ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ‘ಹಾಸನದ ಹುಲಿ’ ಎಂದು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಕರ್ತರು ಎದುರು ಬರುತ್ತಿದ್ದಂತೆ ಪ್ರೀತಂ ಗೌಡ ಬೆಂಬಲಿಗರು, “ಗೌಡಾ ಗೌಡಾ.. ಪ್ರೀತಂ ಗೌಡಾ” ಎಂದು ಕೂಗು ಹಾಕಿದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಕ್ಷಣಕಾಲ ಗಲಾಟೆ ಉಂಟಾಯಿತು.
ಫ್ಲೆಕ್ಸ್ ನಲ್ಲಿ ರಾರಾಜಿಸಿದ ಪ್ರೀತಂ ಗೌಡ
ಮಂಡ್ಯ ನಗರ ಪ್ರವೇಶದ ಆರಂಭದಲ್ಲೇ ಪ್ರೀತಂ ಗೌಡ ಫ್ಲೆಕ್ಸ್ ಹಾಕಲಾಗಿದೆ. ರಸ್ತೆ ಪಕ್ಕದಲ್ಲಿ ಲಾರಿ ನಿಲ್ಲಿಸಿ ಲಾರಿಗೆ ಫ್ಲೆಕ್ಸ್ ಅಳವಡಿಸಲಾಗಿದೆ. ಪ್ರೀತಂ ಗೌಡಗೆ ಸ್ವಾಗತ ಕೋರುವ ಫ್ಲೆಕ್ಸ್ಗಳನ್ನು ಮಂಡ್ಯ ನಗರ ಪ್ರವೇಶದಲ್ಲೇ ರಸ್ತೆಯ ಬದಿಗಳಲ್ಲಿ ಅಳವಡಿಕೆ ಮಾಡಲಾಗಿದ್ದು, ಪ್ರತಿ ಫ್ಲೆಕ್ಸ್‌ನಲ್ಲಿ ಪ್ರೀತಂ ಗೌಡ ಫೋಟೋ ರಾರಾಜಿಸುತ್ತಿದೆ.
“ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದವರನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲಾಗುತ್ತಿದೆ. ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದವರ ಜೊತೆ ವೇದಿಕೆ ಹಂಚಿಕೊಳ್ಳಬೇಕಾ? ಪಾದಯಾತ್ರೆಗೆ ಇದಕ್ಕೆ ಜೆಡಿಎಸ್ ಬೆಂಬಲ ನೀಡಲ್ಲ” ಎಂದು ಕುಮಾರಸ್ವಾಮಿ ಪ್ರೀತಂ ಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಮಂಡ್ಯದಲ್ಲಿ ಪ್ರೀತಂ ಗೌಡ ಆಗಮಿಸಿರುವುದಕ್ಕೆ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಗಲಾಟೆಗೆ ಕುಮಾರಸ್ವಾಮಿ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಪಾದಯಾತ್ರೆ, ಮಂಡ್ಯ, ಪ್ರೀತಂ ಗೌಡ, ಬಿಜೆಪಿ-ಜೆಡಿಎಸ್, ಎಚ್ ಡಿ ಕುಮಾರಸ್ವಾಮಿ, Padayatra, Mandya, Pritam Gowda, BJP-JDS, HD Kumaraswamy,