ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿಯನ್ನು ಘೋಷಿಸಿದ್ದ ಪ್ರಧಾನಿಗಳು ಇದೀಗ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಾನು ಮೀಸಲಾತಿಯ ಪರವಾಗಿದ್ದೇನೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಜವಾಬ್ದಾರಿತನದ ಪ್ರತೀಕ ಎಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಮೀಸಲಾತಿಯು ಐಸಿಹಾಸಿಕ ದೌರ್ಜನ್ಯ ಹಾಗೂ ಅವಮಾನಕ್ಕೆ ಒಳಗಾದ ಜನ ಸಮುದಾಯಕ್ಕೆ ನೀಡಬೇಕಾದ ಅಂಶ ಎಂಬ ಸಂಗತಿಯು ಸಂವಿಧಾನದಲ್ಲಿ ಸ್ಪಷ್ಟವಾಗಿ ಇದ್ದರೂ ಕೂಡಾ ಅದನ್ನು ಸಂಪೂರ್ಣವಾಗಿ ಬದಿಗೆ ತಳ್ಳಿದ್ದಾರೆ” ಎಂದು ಕಿಡಿಕಾರಿದರು.
“ಭಾರತದ ವಿಭಜನೆ ಆದ ಸಂದರ್ಭದಲ್ಲಿ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋದ ಮುಸ್ಲಿಮರು ಪಾಕಿಸ್ತಾನದ ಸದಸ್ಯರಾದರು. ಭಾರತವನ್ನೇ ನಂಬಿ ಇಲ್ಲೇ ಇದ್ದ ಮುಸ್ಲಿಮರು ಭಾರತೀಯರಾದರು” ಎಂದಿದ್ದಾರೆ.
“ಆ ಸಂದರ್ಭದಲ್ಲಿ ಹೇಳಿದ ಮಾತಿದು; ಈ ದೇಶದ ಅಲ್ಪಸಂಖ್ಯಾತರು, ಇಲ್ಲಿನ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ಇಲ್ಲಿ ಜೀವಿಸಲು ನಿರ್ಧರಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಟ್ಟ ಅವರೊಂದಿಗೆ ಸೌಹಾರ್ದತೆಯಿಂದ ಇದ್ದು ಅವರನ್ನು ಕಾಪಾಡಬೇಕಾದ್ದು ಭಾರತೀಯರಾದ ನಮ್ಮ ಜವಾಬ್ದಾರಿ ಎಂದಿದ್ದರು” ಎಂದು ನೆನಪಿಸಿದ್ದಾರೆ.
“ಆದರೆ ಇತ್ತೀಚೆಗೆ ಬಾಬಾ ಸಾಹೇಬರ ಮೇಲೆ ನಕಲಿ ಪ್ರೀತಿ ತೋರುತ್ತಿರುವ ಪ್ರಧಾನಿಗಳು ಅವರ ಮಾತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ತಾನೊಬ್ಬ ಎಲ್ಲ ಸಮುದಾಯಗಳ ಪ್ರಧಾನಿ ಎಂಬುದನ್ನು ಮರೆತು ಚುನಾವಣೆಯ ಕಾರಣಕ್ಕೆ ಮುಸ್ಲಿಮ್ ಸಮುದಾಯಗಳ ನೇರವಾಗಿ ದ್ವೇಷ ಕಾರುತ್ತಿರುವುದು ನನ್ನಲ್ಲಿ ಆತಂಕ ಹುಟ್ಟಿಸಿದೆ” ಎಂದು ಆರೋಪಿಸಿದ್ದಾರೆ.
“ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ವಿರೋಧಿ ತಂತ್ರವನ್ನು ಪಾಲಿಸುತ್ತಿದ್ದ ಮತ್ತು ನಾವು ಇರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುವಂತಹ ಸಂಸದರು ಮತ್ತು ಸಚಿವರನ್ನು ತನ್ನ ಸಂಪುಟದಲ್ಲಿ ಇಟ್ಟುಕೊಂಡಿರುವ ಪ್ರಧಾನಿಗಳು ಮೂಲತಃ ಮೀಸಲಾತಿಯ ವಿರೋಧಿಯೇ ಆಗಿದ್ದು ಚುನಾವಣಾ ಕಾರಣಕ್ಕಾಗಿ ಸಂವಿಧಾನದ ರಕ್ಷಣೆ ಎಂಬ ಪದವನ್ನು ಬಳಸುತ್ತಿರುವ ಇವರ ಕುತಂತ್ರದ ಮಾತುಗಳನ್ನು ಯಾರೂ ನಂಬಬಾರದು ಮತ್ತು ಈ ಸಂವಿಧಾನ ವಿರೋಧಿಗಳಿಗೆ ನಮ್ಮ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಬಾಬಾ ಸಾಹೇಬರು ಕಲ್ಪಿಸಿದ ಮತದಾನದ ಮೂಲಕವೇ ತಕ್ಕ ಉತ್ತರ ನೀಡಿ ಸಂವಿಧಾನದ ಆಶಯಗಳನ್ನು ಉಳಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಎಲ್ಲರಲ್ಲೂ ಅರಿಕೆ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.