ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ದೇವೇಗೌಡ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಜೂನ್ 9ರಂದು ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ದೇವೇಗೌಡ ಅವರು ಭಾಗಿಯಾಗಿರಲಿಲ್ಲ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ದೇವೇಗೌಡ ಅವರು, “ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನಿಮಗೆ ಅಭಿನಂದನೆ. ಇದೊಂದು ಐತಿಹಾಸಿಕ ಕ್ಷಣ. ನಾನು ಕೂಡ ಸಮಾರಂಭದಲ್ಲಿ ಹಾಜರಿರಬೇಕಿತ್ತು. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷವು ಎನ್‌ಡಿಎ ಮೈತ್ರಿಕೂಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ‘ಎಲ್ಲರೊಂದಿಗೆ ಎಲ್ಲರ ವಿಕಾಸ’ ಎಂಬ ಘೋಷ ವಾಕ್ಯದಂತೆ ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದರು. ಈ ಬೆನ್ನಲ್ಲೇ ಮೋದಿ ಅವರು ಆರೋಗ್ಯ ವಿಚಾರಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ, ಹೊಸ ಸರ್ಕಾರದ ಬಗ್ಗೆ ತಮಗೆ ಇರುವ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ಹಾಗೆ ನನ್ನ ಆರೋಗ್ಯವನ್ನೂ ವಿಚಾರಿಸಿದರು. ಅವರ ಕಾಳಜಿಗೆ ನಾನು ಆಭಾರಿ. ಅವರ ಈ ಕಾಳಜಿ ನನ್ನನ್ನು ಭಾವುಕರನ್ನಾಗಿಸಿತು. ದೇವರ ಆಶೀರ್ವಾದ ಸದಾ ಅವರ ಮೇಲೆ ಇರಲಿ. ಅವರು ಭಾರತವನ್ನು ಇನ್ನಷ್ಟು ತ್ತರಕ್ಕೆ ಕೊಂಡೊಯ್ಯಲಿ” ಎಂದು ದೇವೇಗೌಡರು ಪೋಸ್ಟ್ ಮಾಡಿ ತಿಳಿಸಿದ್ದಾರೆ.