ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವನೆ ವಿಚಾರವಾಗಿ ಪ್ರಧಾನಿ ಪಟ್ಟಕ್ಕೆ ಸಮರ್ಥರು ಎಂಬುದನ್ನು ಮಗ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, “ಪ್ರಧಾನಿ, ಉಪಪ್ರಧಾನ ಮಂತ್ರಿ ಯಾರಾಗಬೇಕು ಎಂಬ ವಿಚಾರ ಬಂದಾಗ ಆ ಸಮಾಜದ ನಾಯಕರಿಗೆ ಜಾತಿಯ ಲೇಪನ ಹಚ್ಚುವುದು ತಪ್ಪು. ಅವರೂ ಸಮರ್ಥರಲ್ಲವಾ? ಆ ಸಮುದಾಯದಲ್ಲಿನವರ (ಪರಿಶಿಷ್ಟ ಜಾತಿ) ದಕ್ಷತೆ ನೋಡುವುದಿಲ್ಲವಾ?” ಎನ್ನುವ ಮೂಲಕ ತಮ್ಮ ತಂದೆ ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
“ನರೇಂದ್ರ ಮೋದಿ ಅವರಿಗೆ ಸ್ಥಾನ ಮಾನ ಕೊಡಬೇಕಾದರೆ ಅವರ ಜಾತಿ ಕೇಳಲಿಲ್ಲ. ಅವರು ಎಷ್ಟು ಸಮರ್ಥರು ಎನ್ನುವುದನ್ನು ಕಳೆದ ಹತ್ತು ವರ್ಷಗಳಿಂದ ನೋಡುತ್ತಿದ್ದೇವೆ” ಎಂದರು.
“ಮೈತ್ರಿಕೂಟದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿಗೆ ಕಳುಹಿಸುವುದು ನಮ್ಮ ಮುಂದಿರುವ ಮುಖ್ಯ ಗುರಿ. ಯಾರು ಪ್ರಧಾನಿ, ಯಾರು ಉಪ ಪ್ರಧಾನಿ ಎಂಬ ಸವಾಲು ಸದ್ಯಕ್ಕೆ ನಮ್ಮ ಮುಂದೆ ಇಲ್ಲ. ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ 200ರಿಂದ 250 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ” ಎಂದರು.