ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ, ಕಸ ಸಂಗ್ರಹ ಮೇಲಿನ ಸೆಸ್ ಸೇರಿದಂತೆ ಜನ ಬಳಕೆಯ ವಸ್ತುಗಳು ಹಾಗೂ ಸೇವೆಗಳ ದರ ಇಂದಿನಿಂದ ಮತ್ತಷ್ಟು ತುಟ್ಟಿಯಾಗಲಿದೆ.
ದರ ಏರಿಕೆ ಬಿಸಿ ಸರಣಿ ಇಲ್ಲಿಗೆ ನಿಂತಿಲ್ಲ, ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದಂತೆ ಇತರ ವಸ್ತುಗಳ ಬೆಲೆಯೂ ದುಬಾರಿಯಾಗುತ್ತಿವೆ. ಇಂದಿನಿಂದ ಜನ ಬಳಕೆಯ ಹಾಲು, ಮೊಸರು ದರ ಒಂದು ಲೀಟರ್ಗೆ 4 ರೂಪಾಯಿ ಏರಿಕೆಯಾಗಲಿದೆ.
ಕೆಎಂಎಫ್ ಮನವಿಯಂತೆ ರಾಜ್ಯ ಸರ್ಕಾರ ಹಾಲಿನ ದರ ಏರಿಕೆಗೆ ಸಹಮತ ನೀಡಿದೆ. ಅದರಂತೆ ಹಾಲು, ಮೊಸರು ದರ ಹೆಚ್ಚಳ ಇಂದಿನಿಂದ ಗ್ರಾಹಕರ ಜೇಬು ಸುಡಲಿದೆ.
ವಿದ್ಯುತ್ ದರ ಹೆಚ್ಚಳವೂ ಸಹ ಇಂದಿನಿಂದ ಜಾರಿಗೆ ಬರಲಿದ್ದು, ಏಪ್ರಿಲ್ ತಿಂಗಳ ಬಿಲ್ ಪಾವತಿಸುವ ಸಂದರ್ಭದಲ್ಲಿ ವಿದ್ಯುತ್ ಬಿಲ್ ಶಾಕ್ ನೀಡಲಿದೆ. ಗೃಹ ಜ್ಯೋತಿ ಯೋಜನೆ ಹೊರತುಪಡಿಸಿದ ಗ್ರಾಹಕರಿಗೆ ಒಂದು ಯುನಿಟ್ಗೆ ವಿದ್ಯುತ್ ದರ 36 ಪೈಸೆಯಷ್ಟು ಹೆಚ್ಚಳವಾಗಲಿದೆ. ಕೆಪಿಟಿಸಿಎಲ್ ಮತ್ತು ಎಸ್ಕಾಮ್ಗಳ ಮನವಿ ಮೇರೆಗೆ ಕೆಇಆರ್ಸಿ ವಿದ್ಯುತ್ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆ ಪ್ರಕಾರ ಇಂದಿನಿಂದ ಒಂದು ಯುನಿಟ್ಗೆ 36 ಪೈಸೆ ಕರೆಂಟ್ ದರ ತುಟ್ಟಿಯಾಗಲಿದೆ.
ಟ್ರೋಲ್ ದುಬಾರಿ
ಸಾರಿಗೆ ಕ್ಷೇತ್ರದಲ್ಲಿ ವಾಹನಗಳ ಟೋಲ್ ದರವೂ ಇಂದಿನಿಂದ ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿಯಂತೆ ಟೋಲ್ ಶುಲ್ಕ ದರ ಶೇ. 3 ರಿಂದ 5 ರಷ್ಟು ಏರಿಕೆಯಾಗಲಿದೆ. ರಾಜ್ಯದಲ್ಲಿ ಒಟ್ಟು 60ಕ್ಕೂ ಹೆಚ್ಚು ಟೋಲ್ ಗಳಿದ್ದು ದರ ಏರಿಕೆ ಬಿಸಿ ವಾಹನ ಸವಾರರಿಗೆ ಹೊರೆಯಾಗಲಿದೆ.
ಕಸ ಸಂಗ್ರಹ ಸೆಸ್
ರಾಜಧಾನಿ ಬೆಂಗಳೂರಿನಲ್ಲಿ ಕಸ ಸಂಗ್ರಹದ ಮೇಲಿನ ಸೆಸ್ ಸಹ ಇಂದಿನಿಂದ ಜಾರಿಗೆ ಬರಲಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಕಸ ಸಂಗ್ರಹದ ಮೇಲೆ ಮಾಸಿಕ ಸೆಸ್ ಅನ್ನು ವಸೂಲು ಮಾಡಲಿದೆ. ಕಸದ ಸೆಸ್ ಅನ್ನು ಎರಡು ವಿಭಾಗಗಳನ್ನಾಗಿ ಮಾಡಲಾಗಿದ್ದು, ಮನೆಗಳ ಕಸ ಮತ್ತು ವಾಣಿಜ್ಯ ಸಂಸ್ಥೆಗಳ ಕಸ ಸಂಗ್ರಹಕ್ಕೆ ಪ್ರತ್ಯೇಕ ಪ್ರಮಾಣದ ಸೆಸ್ ವಿಧಿಸಲಾಗುತ್ತದೆ.
ಗೃಹ ಬಳಕೆಯ 600 ಚದರ್ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ., 600 ಚದರದಿಂದ 1000 ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ., 1 ಸಾವಿರದಿಂದ 2 ಸಾವಿರ ಚದರ್ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ., 2 ಸಾವಿರದಿಂದ 3 ಸಾವಿರ ಚದರ್ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ., 3 ಸಾವಿರದಿಂದ 4 ಸಾವಿರ ಚದರ್ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ., 4 ಸಾವಿರ ಚದರ್ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ. ಕಸ ಸಂಗ್ರಹದ ಸೆಸ್ ಇರಲಿದೆ.
ನೀರಿನ ದರ ಏರಿಕೆ
ಬೆಂಗಳೂರಿನಲ್ಲಿ ಜಲಮಂಡಳಿಯು ಯಾವುದೇ ಕ್ಷಣದಲ್ಲಿ ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡಲು ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರಕ್ಕೆ ಈಗಾಗಲೇ ದರ ಏರಿಕೆ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರವು ಒಂದು ಲೀಟರ್ ಕುಡಿಯುವ ನೀರಿಗೆ ಒಂದು ಪೈಸೆಯಷ್ಟು ದರ ಏರಿಕೆ ಮಾಡುವ ಚಿಂತನೆಯಲ್ಲಿದೆ.
ಕುಡಿಯುವ ನೀರಿನ ಜೊತೆಗೆ ರಾಜಧಾನಿಯಲ್ಲಿ ಆಟೋ ಪ್ರಯಾಣ ದರ ಏರಿಕೆ ಬಗ್ಗೆಯೂ ಸಾರಿಗೆ ಇಲಾಖೆ ಮತ್ತು ಆಟೋ ಸಂಘಗಳ ನಡುವೆ ಹಲವು ಸುತ್ತಿನ ಸಭೆ ನಡೆದಿದೆ. ಆಟೋ ಮೀಟರ್ ದರ ಸಹ ಹೆಚ್ಚಳವಾಗುವ ಕಾಲ ಸನ್ನಿಹಿತವಾಗಲಿದೆ. ಆಟೋಮೀಟರ್ ಕನಿಷ್ಠ ದರವು ಈಗಿರುವ 30 ರೂಪಾಯಿಯಿಂದ 40 ರೂಪಾಯಿ ತನಕ ಏರಿಕೆಯಾಗುವ ಸಾಧ್ಯತೆಗಳಿವೆ. ಒಂದು ಕಿಲೋಮೀಟರ್ಗೆ 5 ರೂಪಾಯಿ ಹೆಚ್ಚಿಸುವಂತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ.