ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕಳೆದ ಸಾಲಿನಲ್ಲಿ ಆಹಾರ ಧಾನ್ಯಗಳ ಮಾರಾಟ ದರ ಶೇ.40 ಏರಿಕೆಯಾಗಿದೆ. ಬಿತ್ತನೆ ಬೀಜ ಖರೀದಿ ಮೇಲೂ ಇದರ ಪರಿಣಾಮ ಬೀರಿದೆ. ಹೀಗಾಗಿ ನಾವು ಬಿತ್ತನೆ ಬೀಜಕ್ಕೆ ಶೇ.30 ದರ ಏರಿಸಿದ್ದೇವೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಬಿತ್ತನೆ ಬೀಜ ದುಬಾರಿ ವಿಚಾರವಾಗಿ ಎಕ್ಸ್ ತಾಣದಲ್ಲಿ ಜೆಡಿಎಸ್, ‘ಬಿತ್ತನೆ ಬೀಜ ದುಬಾರಿ, ಕೃಷಿ ಸಚಿವರೇ ಎಲ್ಲಿದ್ದೀರಪ್ಪ?’ ಎಂದು ಕಾಲೆಳೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, “ರಾಜ್ಯದಲ್ಲಿ ಬಿತ್ತನೆ ಬೀಜ ದರ ಹೆಚ್ಚಳದ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಬೆಲೆ ಹೆಚ್ಚಳಕ್ಕೆ ಕೆಲವು ಕಾರಣಳಿದ್ದು ಅವುಗಳನ್ಮು ನಾವು ಗಮನಿಸಬೇಕು” ಎಂದಿದ್ದಾರೆ.
“2023 -24 ನೇ ಸಾಲಿನಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರ ನಮ್ಮನ್ನು ಕಾಡಿದೆ. 46ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾದರೂ ಪ್ರಸ್ತುತ ಸಾಲಿಗೆ ಬಿತ್ತನೆ ಬೀಜಕ್ಕೆ ಕೊರತೆಯಾಗದಂತಮುಂಜಾಗ್ರತೆ ವಹಿಸಿ ಈಗಾಗಲೇ ಪೂರೈಕೆ ಮಾಡಲಾಗಿದೆ. ಖರೀದಿ ,ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಪ್ರಯೋಗಾಲಯದಲ್ಲಿ ಪರೀಕ್ಷೆ, ಗ್ರೇಡಿಂಗ್,ದಾಸ್ತಾನು ಮಾಡುವುದು, ಸಾಗಾಟ, ಬೀಜ ಪ್ರಮಾಣೀಕರಣ, ಕಾರ್ಮಿಕರ ಕೂಲಿ ಹಣ ಎಲ್ಲಾ ಸೇರಿಸಿ ಬಿತ್ತನೆ ಬೀಜದ ಮಾರಾಟ ದರ ನಿಗದಿ ಯಾಗುತ್ತದೆ” ಎಂದು ತಿಳಿಸಿದ್ದಾರೆ.
“ಬಿತ್ತನೆ ಬೀಜವನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೇರವಾಗಿ ರೈತ ಬೀಜೋತ್ಪಾದಕರಿಂದ ಖರೀದಿಸುತ್ತಿವೆ. ಬೆಲೆ ಹೆಚ್ಚಳದ ಲಾಭವೂ ರೈತ ಬಿಜ ಉತ್ಪಾದಕರಿಗೇ ವರ್ಗಾವಣೆ ಆಗುತ್ತಿದೆ. ಇದು ನಮ್ಮ ಸರ್ಕಾರ ಬಂದ ನಂತರ ಮಾಡಿರುವ ಖರೀದಿ ಮಾರಾಟ ಪ್ರಕ್ರಿಯೆ ಅಲ್ಲ.ಹಿಂದನ ಸರ್ಕಾರಗಳ ಅವಧಿಯಲ್ಲಿಯೂ ಅನುಸರಿಸಲಾದ ಕ್ರಮ ಮುಂದುವರೆಸಿದ್ದೇವೆ” ಎಂದು ವಿವರಿಸಿದ್ದಾರೆ.
“ನೆರೆಯ ಮಹಾರಾಷ್ಟ್ರದಲ್ಲಿಯೂ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ದರ ನಿಗಧಿ ಮಾಡಲಾಗಿದೆ ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಯುವ ಶೇಂಗಾ ದ ಬಿತ್ತನೆ ಬೀಜದ ಬೆಲೆ ಶೇ.1 ಮಾತ್ರ ಏರಿಕೆಯಾಗಿದೆ.ಹಾಗೇ ಸೊಯಬೀನ್ ಬಿತ್ತನೆ ಬೀಜದ ಮಾರಾಟ ದರ ಶೇ.8 ಇಳಿಕೆಯಾಗಿದೆ.ರೈತರ ಹಿತ ನಮ್ಮ ಆದ್ಯತೆ. ಜೆಡಿಎಸ್ ತಮ್ಮ ಕಾಳಜಿಯ ನುಡಿಗೆ ಧನ್ಯವಾದಗಳು. ನಾನು ಇಲ್ಲೇ ಕರ್ನಾಟಕ ರಾಜ್ಯದಲ್ಲೇ ಇದ್ದೇನೆ. ಯಾವಾಗ ಬೇಕಿದ್ದರೂ ಸಂಪರ್ಕಕ್ಕೆ ಸಿಗುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.