ಹಿಜಾಬ್ ವಿಚಾರವಾಗಿ ಉಂಟಾಗಿದ್ದ ವಿವಾದವನ್ನು ಪ್ರಸ್ತಾಪಿಸಿ ಉಡುಪಿಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ ಅವರು ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಟೀಕಿಸಿರುವ ಸಂಗತಿ, ಹಿಂದುತ್ವವಾದಿಗಳಿಗೆ ಬಂದಿರುವ ದುರದೃಷ್ಟಕರ ಪರಿಸ್ಥಿತಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ವಿಧಾನಸಭೆ ಬಳಿಕ, ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು, ಪಕ್ಷದಿಂದ ಉಚ್ಚಾಟನೆಗೊಂಡ ಬಿಜೆಪಿ ಹಿರಿಯ ನಾಯಕರ ರಘುಪತಿ ಭಟ್ ಅವರ ಪರವಾಗಿ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ.
ಪ್ರಸ್ತುತದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಪ್ರತಾಪ್ ಸಿಂಹ, ಸಮಾನದುಃಖಿಯ ಪರ ಬೆಂಬಲಕ್ಕೆ ನಿಂತಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ.
“ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ ಎಂಎಲ್ಎ ಟಿಕೆಟ್ ಗಲಿಲ್ಲ, ಕೊನೆಗೆ ಎಂಎಲ್ಸಿ ಟಿಕೆಟ್ ಕೂಡ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಅಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರಘುಪತಿ ಭಟ್ ಪ್ರತಿಕ್ರಿಯೆ
ಪ್ರತಾಪ್ ಸಿಂಹ ಟ್ವೀಟ್ಗೆ ಪ್ರತಿಕ್ರಿಯಿಸಿರುವ ರಘುಪತಿ ಭಟ್, “ಪ್ರತಾಪ್ ಸಿಂಹ ಅವರಿಗೆ ವಂದನೆಗಳು. ನಿಜವಾದ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಹಿಂದುತ್ವವಾದಿಗಳಿಗೆ ನನ್ನ ನಿಲುವು ಏನೆಂದು ಸ್ಪಷ್ಟವಾಗಿ ತಿಳಿದೆ. ಪರಿವಾರದ ಮನಸ್ಥಿತಿಯ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನನ್ನ ಜೊತೆ ಇದ್ದಾರೆ. ನನ್ನ ಉಸಿರು ಇರುವವರೆಗೆ ಅವರ ಧ್ವನಿಯಾಗಿ ಇರುತ್ತೇನೆ” ಎಂದು ತಿಳಿಸಿದ್ದಾರೆ.


