ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ನಾಡಿನ ಖಜಾನೆ ಬರಿದು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
“ಸ್ವಾತಂತ್ರ್ಯ ಬಂದ ಬಳಿಕ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ದೋಚಿದೆ ಅಷ್ಟೇ. ಈಗ ನೋಡಿದರೆ ಈ ಭಾಗ್ಯ.. ಆ ಭಾಗ್ಯ ಎಂದು ಏನೆಲ್ಲಾ ಘೋಷಣೆ ಮಾಡುತ್ತ ದೇಶದ ಖಜಾನೆ ಬರಿದು ಮಾಡಲು ಹೊರಟಿದೆ” ಎಂದು ಹರಿಹಾಯ್ದರು.
“ದೇಶದ ನಾಗರಿಕರಿಗೆ ನಿಜವಾಗಿಯೂ ಬೇಕಾಗಿರುವುದು ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ. ಆದರೆ, ಇದಕ್ಕೆ ಪೂರಕ ಮೂಲ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಯಾವ ಯೋಜನೆಯೂ ಕಾಂಗ್ರೆಸ್ಸಿಗರಲ್ಲಿ ಇಲ್ಲ” ಎಂದು ಜೋಶಿ ಹೇಳಿದರು.
“ಕಾಂಗ್ರೆಸ್ ಆಡಳಿತದಲ್ಲಿ ಇರುವ ಕರ್ನಾಟಕವೂ ಶ್ರೀಲಂಕಾ ಮತ್ತು ಕೇರಳ ಕಂಡಂಥ ದುಸ್ಥಿತಿಯನ್ನೇ ಕಾಣಬೇಕಾದೀತು. ಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕು” ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ಕೃಷ್ಣ ನಾಯ್ಕ, ಮಾಜಿ ಸಚಿವ ಆನಂದ ಸಿಂಗ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನ ಗೌಡ, ಎಸ್ಟಿ ಮೋರ್ಚಾ ಪ್ರಮುಖರಾದ ಬಂಗಾರು ಹನಮಂತ, ಹಾಗೂ ಪಕ್ಷದ ಪ್ರಮುಖರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.