ಮಹಿಳೆಯರ ಮೇಲಿನ ಲೈಂಗಿಕ ದೌರ್ಜುನ್ಯ ಆರೋಪ ಕೇಳಿಬರುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಮೌನ ಮುರಿದು, ಎಸ್‌ಐಟಿ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಜ್ವಲ್ ರೇವಣ್ಣ, “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ ಸಿಐಡಿ ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ನೀಡುವಂತೆ ಕೋರಿ ಆರೋಪಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ವಕೀಲ ಅರುಣ್ ಜಿ. ಅವರು ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಉತ್ತರ ನೀಡಿರುವ ವಕೀಲ ಅರುಣ್, “ನನ್ನ ಕಕ್ಷಿದಾರ ಪ್ರಜ್ವಲ್ ರೇವಣ್ಣ ಅವರು ಸದ್ಯ ಪ್ರವಾಸದಲ್ಲಿದ್ದಾರೆ. 7 ದಿನ ಕಾಲಾವಕಾಶ ನೀಡಿ. ನಂತರ, ಮತ್ತೊಂದು ದಿನಾಂಕ ನೀಡಿ. ಅಂದು ಅವರು ವಿಚಾರಣೆಗೆ ಹಾಜರಾಗುತ್ತಾರೆ” ಎಂದಿದ್ದಾರೆ.