ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ರಕ್ಷಣೆ ಕೊಡಬೇಕು. ಈ ಪ್ರಕರಣದದಲ್ಲಿ ಯಾರೇ ಪ್ರಭಾವಿ ಆರೋಪಿಗಳಿದ್ದರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, “ಸಹೋದರ, ಮಗನಂತೆ ನೋಡಿಕೊಳ್ಳುತ್ತಿದ್ದ ಮಹಿಳೆಯರನ್ನು ಪ್ರಜ್ವಲ್ ರೇವಣ್ಣ ಕ್ರೂರವಾಗಿ ನಡೆಸಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ತಾಯಿಂದಿರ, ಸಹೋದರಿಯರ ಪರವಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದು” ಎಂದಿದ್ದಾರೆ.
ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆಯೂ ಕಿಡಿಕಾರಿದ್ದು, “ಈ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮೊದಲೇ ದೇವರಾಜೇಗೌಡ ಮಾಹಿತಿ ನೀಡಿದ್ದಾರೆ. ಆದರೂ ಪ್ರಜ್ವಲ್‌ಗೆ ಟಿಕೆಟ್ ನೀಡಿರುವುದು ಆಘಾತದ ವಿಷಯ. ಈ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದರೂ ಅವರ ಪರವಾಗಿ ಪ್ರಚಾರ ಮಾಡಿದ್ದು ಮತ್ತೊಂದು ಶಾಕ್” ಎಂದು ಹರಿಹಾಯ್ದಿದ್ದಾರೆ.
“ಪ್ರಜ್ವಲ್‌ಗೆ ಭಾರತದಿಂದ ಪರಾರಿಯಾಗಲು ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಪ್ರಧಾನಿ ಮೋದಿ ಅವರು ಹರಿಯಾಣ ಮಹಿಳಾ ಕುಸ್ತಿಪಟುಗಳು, ಮಣಿಪುರದ ಘಟನೆಗಳಲ್ಲಿ ಮೌನ ವಹಿಸಿದ್ದಾರೆ. ಇದು ಮೋದಿ ಪರಿವಾರದ ಸದಸ್ಯರ ಪ್ರಕರಣ” ಎಂದು ತಿವಿದಿದ್ದಾರೆ.
ಸಿದ್ದರಾಮಯ್ಯ ಉತ್ತರ
“ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಷಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು” ಎಂದು ರಾಹುಲ್ ಗಾಂಧಿ ಅವರ ಪತ್ರಕ್ಕೆ ಸಿದ್ದರಾಮಯ್ಯ ಟ್ವೀಟ್ ಮಾಡಿ ತಿಳಿಸಿದ್ದಾರೆ.
“ನೊಂದವರ ಕಣ್ಣೀರು ಒರೆಸುವ ಜೊತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರ್ಕಾರ ಜೊತೆ ನಿಲ್ಲಲಿದೆ ಎಂಬ ವಾಗ್ದಾನವನ್ನು ರಾಹುಲ್ ಗಾಂಧಿ ಅವರು ಸೇರಿದಂತೆ ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ. ಸತ್ಯಮೇವ ಜಯತೇ..” ಎಂದು ಸಿದ್ದರಾಮಯಯ್ಯ ಹೇಳಿದ್ದಾರೆ.