ಎಚ್ ಡಿ ರೇವಣ್ಣ ಅವರಿಗೆ ಜಾಮೀನು ದೊರೆತಿರುವುದು, ಜೈಲಿನಿಂದ ಬಿಡುಗಡೆಯಾಗುತ್ತಿರುವುದು ನನಗೆ ಖುಷಿಯಾಗಿಲ್ಲ. ಇದು ಸಂತಸಪಡುವ ಸಮಯವೂ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮಿಸುವುದೆ ಬೇಡ. ಪಕ್ಷದ ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ಇದು ರಾಜ್ಯವೇ ತಲೆ ತಗ್ಗಿಸುವ ಪ್ರಕರಣ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ” ಎಂದರು.
ರಾಜ್ಯದಲ್ಲಿದೆ ದೊಡ್ಡ ತಿಮಿಂಗಿಲ!
ನಮ್ಮ ರಾಜ್ಯದಲ್ಲಿ ದೊಡ್ಡ ತಿಮಿಂಗಿಲ ಇದೆ. ಆ ತಿಮಿಂಗಲ ಯಾರೆಂದು ರಾಜ್ಯದ ಜನರಿಗೂ ಗೊತ್ತಿದೆ. ಎಸ್ಐಟಿ ತನಿಖೆ ವರದಿ ಶಾಸಕರಿಗೆ ಸರಬರಾಜಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಏಪ್ರಿಲ್ 22ರಂದು ದಾಖಲಾದ ಎಫ್ಐಆರ್ಗೆ ಸಂಬಂಧಿಸಿ ಒಬ್ಬರನ್ನೂ ಬಂಧಿಸಿಲ್ಲ. ನವೀನ್ ಗೌಡ ನಮ್ಮ ಪಕ್ಷದವರಿಗೆ ಕೊಟ್ಟೆ ಅಂದಿದ್ದಾನೆ. ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ? ಪೆನ್ಡ್ರೈವ್ ಹಂಚಿದವರ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಎಸ್ಐಟಿ ಅಧಿಕಾರಿಗಳಿಗೆ ಕೇಳಬಯಸುತ್ತೇನೆ” ಎಂದು ಹೇಳಿದರು.
“ರೇವಣ್ಣ ಕುಟುಂಬ ಮುಗಿಸಲು ಪ್ಲ್ಯಾನ್ ಮಾಡಿದ್ದೇನಂತೆ. ನಾನು ಯಾವಾಗಲೂ ನ್ಯಾಯದ ಪರವಾಗಿ ಇದ್ದೇನೆ. ಇಂತಹ ಘಟನೆ ಮತ್ತೆ ಪುನರಾವರ್ತನೆಯಾಗಬಾರದು. ಯಾವುದೇ ಮುಲಾಜಿಗೆ ಒಳಗಾಗದೇ ತನಿಖೆ ಆಗಬೇಕು. ಮಹಿಳಾ ಸಂತ್ರಸ್ತೆಯರ ಪರ ಹೋರಾಟ ಮಾಡುತ್ತೇನೆ. ಸದ್ಯ ನಾನು ಈ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ನನ್ನ ಬಳಿ ಎಲ್ಲ ದಾಖಲೆಗಳಿವೆ ಮುಂದೆ ಮಾತನಾಡುವೆ ” ಎಂದರು.