Homeಕರ್ನಾಟಕಪ್ರಜ್ವಲ್-ರೇವಣ್ಣ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಸಾಹಿತಿಗಳ ಅಭಿ‌ಪ್ರಾಯ ಸ್ವೀಕರಿಸುತ್ತೇವೆ: ಸಚಿವ ಪರಮೇಶ್ವರ್

ಪ್ರಜ್ವಲ್-ರೇವಣ್ಣ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಸಾಹಿತಿಗಳ ಅಭಿ‌ಪ್ರಾಯ ಸ್ವೀಕರಿಸುತ್ತೇವೆ: ಸಚಿವ ಪರಮೇಶ್ವರ್

ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಈಗಾಗಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾಹಿತಿಗಳು ಪತ್ರ ಬರೆದಿರುವುದರಿಂದ ಎಚ್ಚರಿಸಿದಂತಾಗುತ್ತದೆ. ಸಾಹಿತಿಗಳು ಪತ್ರದ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಾಹಿತಿಗಳು ಸಮಾಜದ ಕಳಕಳಿ ಇರುವಂತವರು. ನಿತ್ಯ ಅನೇಕ ವಿಷಯಗಳನ್ನು ಅವರು ಗಮನಿಸುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ” ಎಂದರು.

ಶಾಸಕ ಹೆಚ್.ಡಿ.ರೇವಣ್ಣ ಅವರೇ ಹಳೇ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಇದೆಲ್ಲವೂ ಗೊತ್ತಿದ್ದು ಮುಂದುವರಿಯಲು ಬಿಟ್ಟಿರುವ, ಕುಟುಂಬದ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅದೆಲ್ಲವನ್ನು ಎಸ್ಐಟಿ ಕ್ರಮ ತೆಗೆದುಕೊಳ್ಳುತ್ತದೆ. ತನಿಖೆ ಹಂತದಲ್ಲಿ ಯಾವ ವಿಚಾರಗಳನ್ನು ನಾವು ಹೇಳಲು ಬರುವುದಿಲ್ಲ. ಇದೆಲ್ಲವನ್ನು ಎಸ್ಐಟಿ ಅವರು ಗಮನಕ್ಕೆ ತೆಗೆದುಕೊಳ್ಳುತ್ತಾರೆ” ಎಂದು ಹೇಳಿದರು.

“ದೊಡ್ಡ ತಿಮಿಂಗಲು ಯಾರು ಎಂಬುದನ್ನು ಹೆಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದರೆ ಮುಗಿಯುತ್ತದೆ. ತಿಮಿಂಗಲು ಇದೆ ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಅದನ್ನು ಹೇಳದಿರುವುದೇ ದೊಡ್ಡ ತಪ್ಪು. ಕುಮಾರಸ್ವಾಮಿ ಅವರು ದಿನಕ್ಕೊಂದು ಹೇಳಿಕೆ ಕೊಡುತ್ತಿರುತ್ತಾರೆ. ಪೆನ್‌ಡ್ರೈವ್ ಕೊಟ್ಟ ಬಳಿಕ ಆ ಮಾತನ್ನು ಹೇಳಬೇಕು. ನಾವು ತನಿಖೆ ಮಾಡಲಿಲ್ಲವಾದರೆ ಆರೋಪಿಸಲಿ” ಎಂದರು.

“ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಆಗುತ್ತಿರುವ ಮಾಹಿತಿ ನನಗಿಲ್ಲ. ಆಧಿಕಾರಿಗಳಿಗೆ ಮಾಹಿತಿ ಇರುತ್ತದೆ. ತನಿಖೆ ನಡೆಯುವಾಗ ಯಾವ ವಿಷಯವನ್ನು ಹೇಳಬೇಕು, ಹೇಳಬಾರದು ಎಂಬುದು ಅವರಿಗಿರುತ್ತದೆ. ಕೆಲವು ಸಂದರ್ಭದಲ್ಲಿ ಇಂಟಲಿಜೆನ್ಸ್ ಅವರಿಗೆ ಗೊತ್ತಿರುವುದಿಲ್ಲ. ಆದರೆ, ಬೇರೆಯವರಿಗೆ ಗೊತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಹೇಳಿದರೆ ಸಹಾಯವಾಗುತ್ತದೆ” ಎಂದು ತಿಳಿಸಿದರು.

“ಮುಖ್ಯಮಂತ್ರಿ ಅವರ ಜೊತೆಗಿನ ಚರ್ಚೆ ಹೇಳಿಕೊಳ್ಳುವಂತದ್ದು ಏನಿಲ್ಲ. ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಎಲ್ಲವೂ ಸಾಮಾನ್ಯವಾಗಿ ಮಾಡೇ ಮಾಡುತ್ತೇವೆ. ಅದೆಲ್ಲವನ್ನು ಹೇಳಲು ಆಗುವುದಿಲ್ಲ” ಎಂದರು.

“ಸಚಿವ ಸತೀಶ್ ಜಾರಕಿಹೊಳಿ ಅವರ ಮಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆ ವಿಚಾರದಲ್ಲಿ ಏನೇನು ಆಗಿದೆ ಎಂಬುದರ ಕುರಿತು ಚರ್ಚಿಸಲು ಭೇಟಿಯಾಗಿದ್ದೆ. ಆ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ. ಸಮುದಾಯವಾರು ಡಿಸಿಎಂ ನೇಮಕ ವಿಚಾರದ ಚರ್ಚೆ ನನಗೆ ಗೊತ್ತೇ ಆಗುವುದಿಲ್ಲ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments