ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದಡಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಮಹಿಳಾ ಪೊಲೀಸರನ್ನೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಕಳುಹಿಸಿ ಬಂಧಿಸಿರುವುದು ವಿಶೇಷವಾಗಿದೆ.
ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೆ ಎಸ್ಐಟಿ ತಂಡದಲ್ಲಿರುವ ಐಪಿಎಸ್ ಅಧಿಕಾರಿಗಳಾದ ಸುಮನ್ ಪನ್ನೇಕರ್ ಹಾಗೂ ಸೀಮಾ ಲಾಟ್ಕರ್ ಅವರ ಮುಂದಾಳತ್ವದ ಮಹಿಳಾ ತಂಡ ಅರೆಸ್ಟ್ ವಾರೆಂಟ್ ನೀಡಿ ಬಂಧಿಸಿದೆ.
ಉದ್ದೇಶಪೂರ್ವಕವಾಗಿಯೇ ಮಹಿಳಾ ಪೊಲೀಸರನ್ನು ಕಳುಹಿಸಿ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ಕಾರಣ ಪ್ರಜ್ವಲ್ಗೆ ಸ್ಪಷ್ಟ ಸಂದೇಶ ತಿಳಿಸಲೆಂದೇ ಮಹಿಳಾ ಪೊಲೀಸರನ್ನು ಕಳಿಸಲಾಗಿತ್ತು ಎನ್ನಲಾಗಿದೆ. ಮಹಿಳಾ ಪೊಲೀಸರು ತಮ್ಮ ವಾಹನದಲ್ಲಿ ಎಸ್ಐಟಿ ಕಚೇರಿಗೆ ಪ್ರಜ್ವಲ್ ರೇವಣ್ಣ ಅವರನ್ನು ಕರೆತಂದಿದ್ದಾರೆ.
ಲೋಕಸಭಾ ಚುನಾವಣೆಯ ಮತದಾನದ ನಂತರ ದೇಶದಿಂದ ಪರಾರಿಯಾಗಿದ್ದ ಪ್ರಜ್ವಲ್, 35 ದಿನಗಳ ಬಳಿಕ ಜರ್ಮನಿಯಿಂದ ನಗರದ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ 12.50 ಗಂಟೆಗೆ ಸುಮಾರಿಗೆ ಬಂದಿಳಿದಿದ್ದರು.