ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಆಡಿಯೊ, ವಿಡಿಯೊ ಮತ್ತು ಚಿತ್ರಗಳ ಪೆನ್‌ಡ್ರೈವ್ ಹಾಗೂ ಸಿ.ಡಿ ಹಂಚಿಕೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹಾಸನದ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಹೀಗಾಗಿ ಇದೀಗ ಎಲ್ಲರಿಗೂ ಬಂಧನದ ಭೀತಿ ಶುರುವಾಗಿದೆ.
ಪ್ರಜ್ವಲ್ ಮತ್ತು ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಿನೇ ದಿನೇ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸುತ್ತಿದೆ. ಎಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಪೆನ್ ಡ್ರೈವ್ ಹಂಚಿಕೆಯ ನಾಲ್ವರು ಆರೋಪಿಗಳ ಬಗ್ಗೆ ಎಸ್‌ಐಟಿ ಮೌನವಹಿಸಿದೆ ಎಂದು ಆರೋಪಿಸಿದ್ದರು.
ಆರೋಪಿಗಳ ನಿರೀಕ್ಷಣಾ ಜಾಮೀನು ನಿರಾಕರಣೆ ಆಗಿದ್ದರಿಂದ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟಿ ಆಲಿಯಾಸ್ ಪುಟ್ಟರಾಜ್, ನವೀನ್ ಗೌಡ ಹಾಗೂ ಚೇತನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸಂಸದ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋ, ಫೋಟೋ ಸೃಷ್ಟಿ ಮಾಡಿ ಪೆನ್ ಡ್ರೈ ವ್ ಮೂಲಕ ಹಂಚಿಕೆ ಆರೋಪ ಈ ನಾಲ್ವರ ಮೇಲೆ ಕೇಳಿಬಂದಿದೆ. ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್, ಪುಟ್ಟರಾಜ್, ನವೀನ್ ಗೌಡ, ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ದ ಜೆಡಿಎಸ್ ದೂರು ನೀಡಿತ್ತು.
ಪೆನ್ ಡ್ರೈವ್ ವೈರಲ್ ಆರೋಪ ಪ್ರಕರಣ ಇನ್ನೂ ಎಸ್ಐಟಿಗೆ ಹಸ್ತಾಂತರವಾಗಿಲ್ಲ. ಕೇಸ್ ಹಸ್ತಾಂತರ ಆಗದ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಕಾರು ಚಾಲಕ ಕಾರ್ತಿಕ್ ಗೌಡಗೆ ಈಗಾಗಲೇ ಎಸ್‌ಐಟಿ ನೋಟಿಸ್ ನೀಡಿದೆ.