ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಎಸ್‌ಪಿಪಿ ಹುದ್ದೆಗೆ ಜಾಯ್ನಾ ಕೊಥಾರಿ ಅವರು ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಇದೇ ಪ್ರಕರಣಕ್ಕೆ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಜಾಯ್ನಾ ಕೊಥಾರಿ ಅವರು ಇಂದು (ಜೂನ್ 11) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅಚ್ಚರಿ ಮೂಡಿಸಿದೆ.
ಪ್ರಜ್ವಲ್ ರೇವಣ್ಣ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡದ ಪರ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಿ ಎನ್ ಜಗದೀಶ ಅವರನ್ನು ರಾಜ್ಯ ಸರ್ಕಾರ ನೇಮಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯ ಮತ್ತು ಸೆಷನ್‌ಗಳ ಮುಂದೆ ಪ್ರಾಸಿಕ್ಯೂಷನ್‌ನ್ನು ಸಮರ್ಥಿಸಲು ರಾಜ್ಯ ಸರ್ಕಾರವು, ಹಿರಿಯ ವಕೀಲರಾದ ಅಶೋಕ್ ಎನ್ ನಾಯಕ್ ಮತ್ತು ಜಾಯ್ನಾ ಕೊಥಾರಿ ಅವರನ್ನು ಹೆಚ್ಚುವರಿ ಎಸ್‌ಪಿಪಿಗಳಾಗಿ ಸರ್ಕಾರ ನೇಮಿಸಿತ್ತು.
ಬಿ ಎನ್ ಜಗದೀಶ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಹೆಚ್ಚುವರಿ ಎಸ್‌ಪಿಪಿ ಜಾಯ್ನಾ ಕೊಥಾರಿ ಸಹ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ರಾಜೀನಾಮೆಗೆ ಸ್ಪಷ್ಟವಾದ ಕಾರಣಗಳು ತಿಳಿದುಬಂದಿಲ್ಲ.
ಎಸ್ಐಟಿ ಕಸ್ಟಡಿಯಲ್ಲಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಲಯವು ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ, ಈ ಹಿನ್ನೆಲೆಯಲ್ಲಿ ಇದೀಗ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಪಾಲಾಗಿದ್ದು, ಅವರಿಗೆ ವಿಚಾರಣಾಧೀನ ಕೈದಿ ನಂಬರ್ 5664 ನೀಡಲಾಗಿದೆ.