ಬಿಜೆಪಿ ಅಧಿಕಾರದಲ್ಲಿರುವುದು ಸಾಕು ಎನ್ನುವ ಅಭಿಪ್ರಾಯಕ್ಕೆ ಜನ ಬಂದಿದ್ದಾರೆ. ರೈತರು ಬೆಸತ್ತು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ, ಬದಲಾವಣೆ ಗಾಳಿ ಬೀಸಿದೆ. ಹಾವೇರಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿ, “ಹಾವೇರಿ ಕ್ಷೇತ್ರದ ಉಸ್ತುವಾರಿ ನನಗೆ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಕೇಲಸ ಮಾಡಲು ಬಂದಿದ್ದೇನೆ.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ” ಎಂದರು.
ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, “ಇದು ಕೇವಲ ಒಂದು ಸೆಕ್ಸ್ ಸ್ಕ್ಯಾಮ್ ಅಲ್ಲ, ರೇಪ್‌ಗೆ ಸಮನಾದ ಪ್ರಕರಣ. ಅಮಾಯಕರ ದುರ್ಲಾಭ ಪಡೆದಿರುವ ಪ್ರಕರಣ. ಇದನ್ನ ಸೆಕ್ಸ್ ಸ್ಕ್ಯಾಮ್ ಎಂದು ಕರೆಯಬೇಡಿ, ಸೆಕ್ಸ್ ಸ್ಕ್ಯಾಮ್‌ಗೂ ಮೀರಿದ ಪ್ರಕರಣ ಇದು” ಎಂದು ಕಿಡಿಕಾರಿದರು
“ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ ಇಲ್ವಾ? ಹಿಂದೂ ಮಹಿಳೆಯರ ತಾಳಿ ಬಗ್ಗೆ ಮಾತನಾಡ್ತಾರೆ. ಹಿಂದು ಮನೆಯ ಮಾಂಗಲ್ಯಸೂತ್ರದ ಬಗ್ಗೆ ಮಾತನಾಡ್ತಾರೆ. ನೂರಾರು ಮಹಿಳೆಯರ ಜೀವನ ಹಾಳು ಮಾಡಿರುವ ಪ್ರಜ್ವಲ್ ಬಗ್ಗೆ ಮಾತೇ ಆಡಲ್ಲ” ಎಂದರು.
“ಹಾಸನದ ಬಿಜೆಪಿ ಲೀಡರ್ ಡಿಸೆಂಬರ್ ತಿಂಗಳಲ್ಲಿ ಈ ಬಗ್ಗೆ ಪತ್ರ ಬರೆದಿದ್ದರು. ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ ಪ್ರಜ್ವಲ್ ಎಂದು ಉಲ್ಲೇಖಿಸಿದ್ದರು. ಪತ್ರ ಬರೆದು ಟಿಕೆಟ್ ಕೊಡಬಾರದು ಎಂದು ಹೇಳಿದರೂ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಪ್ರಧಾನಮಂತ್ರಿಗಳು ಹಿಂದೂ ಮಹಿಳೆಯರ ಬಗ್ಗೆ ಮಾತನಾಡುವವರು, ಇಲ್ಲಿ ಇಷ್ಟೊಂದು ಹಿಂದೂ ಮಹಿಳೆಯರ ಮಾನಭಂಗವಾಗಿದೆ. ಮನೆಗಳನ್ನ ಒಡೆದಿದ್ದಾರೆ, ಮಾಂಗಲ್ಯ ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಲು ಮೋದಿಗೆ ತಾಕತ್ತು ಇಲ್ವಾ? ಎಂದು ವಾಗ್ದಾಳಿ ನಡೆಸಿದರು.
“ಪ್ರಜ್ವಲ್ ರೆವಣ್ಣಗೆ ಕೊಡುವ ಒಂದೊಂದು ಮತ ಮೋದಿಗೆ ಕೊಡುವ ಮತ ಎಂದು ಭಾಷಣ ಮಾಡಿದ್ದಾರೆ.
ಪ್ರಜ್ವಲ್ ಗೆ ಮೋದಿಯವರು ನೇರವಾಗಿ ಬೆಂಬಲ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಅವರಿಗೆ ನಾಚಿಕೆ ಮಾನ ಮರ್ಯಾದೆ ಎಂಬುದೇ ಗೊತ್ತಿಲ್ಲ” ಎಂದು ಹರಿಹಾಯ್ದರು.
“ಎಸ್‌ಐಟಿ ಮಾಡಿದ್ದು ರಾಜಕೀಯ ಪ್ರೇರಿತ ಅಂತಾರೆ. ಹಾಗಾದ್ರೆ ಈ ಪ್ರಕರಣ ಮುಚ್ಚಿ ಹಾಕಬೇಕಾ? ಇದು ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ನಾನು ಚಾಲೆಂಜ್ ಮಾಡ್ತಿನಿ, ಪ್ರಪಂಚದಲ್ಲಿ ಇಷ್ಡು ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿಲ್ಲ. ಇದರ ಬಗ್ಗೆ ಯಾಕೆ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ.
ಮೋದಿಯವರ ಹತ್ರ ಸಿಬಿಐ , ಇಡಿ ಇದೆ ದೇಶ ಬಿಟ್ಟು ಹೋಗಲು ಇವರನ್ಮ ಹೇಗೆ ಬಿಟ್ರು? ಮೋದಿಯವರ ಸಹಕಾರ ಇಲ್ಲದೆ ದೇಶ ಬಿಟ್ಟು ತಪ್ಪಿಸಿಕೊಂಡು ಹೋಗಲು ಸಾಧ್ಯವಾ” ಎಂದು ಪ್ರಶ್ನಿಸಿದರು.
“ಲೈಂಗಿಕ ದೌರ್ಜನ್ಯ ಮಾಡಿ ದೇಶ ಬಿಟ್ಟು ಹೋದವರಿಗೆ ರಕ್ಷಣೆ ಕೊಡುತ್ತಿರುವವರು ಯಾರು? ನೀರವ್ ಮೋದಿ, ಲಲಿತ ಮೋದಿ, ಮಲ್ಯ ಹೊರಗಡೆ ಹೋಗಿದ್ದಾರೆ. ಇವರ ಹಾಗೆ ಇವರನ್ನ ಹೊರಗಡೆ ಕಳಸಿ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ದೇಶಕ್ಕೆ ಅವಮಾನ ಮಾಡುವ ಕೇಲಸ ಬಿಜೆಪಿ ಜೆಡಿಎಸ್ ನವರು ಮಾಡಿದ್ದಾರೆ” ಎಂದು ಟೀಕಿಸಿದರು.