ಎಲ್ಲ ಅಧಿಕಾರಿಗಳಿಗೂ ಹೆದರಿಸುವ ಕೆಲಸವನ್ನು ಎಚ್‌ಡಿಕೆ ಮಾಡುತ್ತಿದ್ದಾರೆ. ಅವರು ಒಂದು ರೀತಿಯಲ್ಲಿ ಕಿಂಗ್ ಆಫ್ ಬ್ಲ್ಯಾಕ್ ಮೇಲ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹರಿಹಾಯ್ದರು.
ಚಿಕ್ಕಮಗಳೂರಿನ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ತೀರ್ಪು ಹೇಳೋಕೆ ಏನು ಲಾಯರಾ? ಜಡ್ಜಾ? ಕುಮಾರಸ್ವಾಮಿಗೆ ನನ್ನ ರಾಜೀನಾಮೆ ಬೇಕಂತೆ, ಕೊಡೋಣ. ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ, ಮಾಡಲಿ, ನನ್ನ ಹೆಸರು ಹೇಳದಿದ್ದರೆ ಅವರಿಗೆ ಮಾರ್ಕೆಟ್ ಓಡಲ್ಲ” ಎಂದರು.
“ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಕುಮಾರಸ್ವಾಮಿ ಹೇಳಿದ್ದರು. ನನ್ನ ಕುಟುಂಬ, ಅವರ ಕುಟುಂಬ ಬೇರೆ ಬೇರೆ ಅಂದಿದ್ದರು. ಈಗ ಅವರ ಪರವಾಗಿ ಸುದ್ದಿಗೋಷ್ಠಿ ಮಾಡೋದೇನು? ಇದೇ ಅಲ್ವಾ ಇವರ ಕುಟುಂಬ ಪ್ರೇಮ” ಎಂದು ಕಿಡಿಕಾರಿದರು.
ತಮ್ಮ ವಿರುದ್ಧ ಜೆಡಿಎಸ್ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, “ಅವರು ಪ್ರತಿಭಟನೆ ಮಾಡಲಿ, ನನ್ನ ಹೆಸರು ಹೇಳದಿದ್ದರೆ ಯಾವುದು ನಡೆಯಲ್ಲ. ನನ್ನ ಹೆಸರು ಇಲ್ಲದೇ ಅವರಿಗೆ ನಿದ್ದೆಯೂ ಬರಲ್ಲ. ಬಿಜೆಪಿಯವರ ಕಡೆಯಿಂದ ಏನು ಮಾಡಬೇಕೋ ಅದನ್ನು ಮಾಡಿಸಿದ್ದಾರೆ” ಎಂದು ಆರೋಪಿಸಿದರು.
“ಎಚ್ ಡಿ ದೇವೇಗೌಡ ಹಾಗೂ ತಮ್ಮ ಹೆಸರು ಬಳಸಬಾರದು ಎಂದು ಎಚ್‌ಡಿಕೆ ಹೇಳಿದ್ದರು. ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಪೆನ್‌ಡ್ರೈವ್ ಪ್ರಕರಣ ತನಿಖೆ ನಡೆಯುತ್ತಿದೆ. ಬೇಕಾದರೆ ಕುಮಾರಸ್ವಾಮಿ ಕೋರ್ಟ್‌ನಲ್ಲಿ ಹೋಗಿ ವಾದ ಮಾಡಲಿ” ಎಂದು ಕುಟುಕಿದರು.