ಪೆನ್ ಡ್ರೈವ್ ಪ್ರಕರಣದ ಕೇಂದ್ರ ಬಿಂದು, ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿದ ಬಿಜೆಪಿ ಇತ್ತ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣವನ್ನು ವ್ಯವಸ್ಥಿತವಾಗಿ ರಾಜಕೀಕರಣ ಮಾಡುವ ಪ್ರಯತ್ನ ಮಾಡುತ್ತಿದೆ. ಮಹಿಳಾ ದೌರ್ಜನ್ಯದ ಮೂಲ ಅಪರಾಧವನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಎಕ್ಸ್ ತಾಣದಲ್ಲಿ ಈ ಕುರಿತು ಸರಣಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ರೇವಣ್ಣರನ್ನು ಬಂಧಿಸಿದ್ದು ತಪ್ಪು ಎನ್ನುತ್ತಿರುವ ಬಿಜೆಪಿ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿ ದೌರ್ಜನ್ಯ ಎಸಗಿದ್ದನ್ನು ಸಮರ್ಥಿಸುತ್ತಿದೆ. ಮತ್ತೊಂದೆಡೆ ದೇವರಾಜೇಗೌಡನನ್ನು ಬಂಧಿಸಿದ್ದನ್ನು ವಿರೋಧಿಸುತ್ತಾ ಆತನ ಲೈಂಗಿಕ ದೌರ್ಜನ್ಯಕ್ಕೆ ಒಪ್ಪಿಗೆಯ ಮುದ್ರೆ ಒತ್ತಿ ಸಂಭ್ರಮಿಸುತ್ತಿದೆ” ಎಂದು ಕಿಡಿಕಾರಿದೆ.
“ಮಹಿಳೆಯರೆಂದರೆ ಬಳಸುವ ವಸ್ತುಗಳು ಎಂಬ ಮನೋಧರ್ಮದ ಬಿಜೆಪಿ ಪಕ್ಷದಿಂದ ಮಹಿಳೆಯರು ಘನತೆಯ ಬದುಕನ್ನು ನಿರೀಕ್ಷಿಸುವುದು ಅಸಾಧ್ಯದ ಮಾತು” ಎಂದು ಕುಟುಕಿದೆ.
ಅಮಿತ್ ಶಾಗೆ ಅದೆಷ್ಟು ಭಯ?
ದೇವರಾಜೇಗೌಡ ಅಮಿತ್ ಶಾ ಆಡಿಸಿದಂತೆ ಆಡುವ ಆಟದ ಗೊಂಬೆ ಎನ್ನುವುದು ಸ್ವತಃ ದೇವರಾಜೇಗೌಡನಿಂದಲೇ ತಿಳಿದಿದೆ.ಅಮಿತ್ ಶಾ ಅಣತಿಯಂತೆ ಪೆನ್ ಡ್ರೈವ್ ಬಿಡುಗಡೆಯಾಯ್ತಾ?
ಜೆಡಿಎಸ್ ಪಕ್ಷವನ್ನು ಮುಳುಗಿಸಲು ಅಮಿತ್ ಶಾ ರೂಪಿಸಿದ ತಂತ್ರವೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಒಂದು ಪೆನ್ ಡ್ರೈವ್ ಇಟ್ಟುಕೊಂಡು ಎರಡು ಪಕ್ಷಗಳನ್ನು ಟಾರ್ಗೆಟ್ ಮಾಡುವ ಹುನ್ನಾರವೇ? ಪೆನ್ ಡ್ರೈವ್ ವಿಷಯವನ್ನು ಇಟ್ಟುಕೊಂಡು ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕಿಸುವ ಹುನ್ನಾರ ನಡೆಸಿದ್ದಾರೆ ಎಂದರೆ ಅಮಿತ್ ಶಾಅವರಿಗೆ ಕಾಂಗ್ರೆಸ್ ಬಗ್ಗೆ ಅದೆಷ್ಟು ಭಯವಿರಬಹುದು” ಎಂದು ಹೇಳಿದೆ.
“ದೇವರಾಜೇಗೌಡನ ಪ್ರತಿ ನಡೆ, ನುಡಿಯೂ ಅಮಿತ್ ಶಾ ನಿರ್ದೇಶನದಂತೆ ನಡೆಯುತ್ತಿದೆ ಎಂದರೆ ಇದೆಲ್ಲದರ ಮಾಸ್ಟರ್ ಮೈಂಡ್ ಸ್ವತಃ ಅಮಿತ್ ಶಾ ಅಲ್ಲವೇ?” ಎಂದು ಕೇಳಿದೆ.