ಸಂತ್ರಸ್ತ ಮಹಿಳಾ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಕುಟುಂಬಕ್ಕೆ ನ್ಯಾಯಾಲಯ ಶಾಕ್ ಮೇಲೆ ಶಾಕ್ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶುಕ್ರವಾರ (ಮೇ 31) ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷನಾ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ.
ಮೈಸೂರಿನ ಕೆಆರ್ ಪೇಟೆಯಲ್ಲಿ ದಾಖಲಾಗಿರುವ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧನದ ಭೀತಿ ಎದುರಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ (ಮೇ 31) ಜಾಮೀನು ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್, ಭವಾನಿ ರೇವಣ್ಣ ಅವರಿಗೆ ಜಾಮೀನು ತಿರಸ್ಕರಿಸಿದೆ.
ಪ್ರಜ್ವಲ್ 6 ದಿನ ಎಸ್‌ಐಟಿ ಕಸ್ಟಡಿಗೆ
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ 34 ದಿನಗಳ ಬಳಿಕ ಬಂಧನಕ್ಕೊಳಗಾಗಿರುವ ಎಚ್ ಡಿ ರೇವಣ್ಣ ಪುತ್ರ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಕೋರ್ಟ್ , ಆರು ದಿನ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಅಲ್ಲದೇ ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಜೂ.7ಕ್ಕೆ ಮುಂದೂಡಿಕೆಯಾಗಿದೆ.
ಎಚ್ ಡಿ ರೇವಣ್ಣಗೂ ಸಂಕಷ್ಟ
ರೇವಣ್ಣಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ವಿಶೇಷ ತನಿಖಾ ದಳ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವ ಆದೇಶದಲ್ಲಿ ಕಾನೂನು ನಿಬಂಧನೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದಂತಿದೆ ಎಂದು ಮೌಖಿಕವಾಗಿ ಹೇಳಿದೆ.
ನ್ಯಾಯಮೂರ್ತಿ ದೀಕ್ಷಿತ್ ಅವರು “ವಾದ ಆಲಿಸಲು ಇದು ಸೂಕ್ತ ಪ್ರಕರಣವಾಗಿದೆ. ನೋಟಿಸ್ ಜಾರಿ ಮಾಡಲಾಗಿದೆ. ಈ ಪೀಠ ಪ್ರತ್ಯೇಕವಾಗಿ ಕುಳಿತಾಗ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ಆದೇಶಿಸಿದೆ. ಇದು ಸಹಜವಾಗಿ ರೇವಣ್ಣ ಅವರನ್ನು ಆತಂಕಕ್ಕೆ ದೂಡಿದೆ.
ಕೆ ಆರ್ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯವು ಶುಕ್ರವಾರ ವಿಚಾರಣೆ ನಡೆಸಿ, ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಭವಾನಿ ರೇವಣ್ಣಗೆ ನೋಟಿಸ್ ಜಾರಿ
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್‌ಐಟಿ ನೊಟೀಸ್ ನೀಡಿದೆ. ಜೂನ್ 1 ರಂದು ಹೊಳೆನರಸೀಪುರದ ಮನೆಯಲ್ಲಿ ತನಿಖೆ ಮತ್ತು ವಿಚಾರಣೆಗೆ ಹಾಜರಿರುವಂತೆ ಭವಾನಿ ಅವರಿಗೆ ತಿಳಿಸಿದೆ.


