Homeಕರ್ನಾಟಕಪ್ರಜ್ವಲ್ ಪ್ರಕರಣ | ಅಮಿತ್‌ ಶಾ ಕೋಪಕ್ಕೆ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ: ರಮೇಶ್‌ ಬಾಬು

ಪ್ರಜ್ವಲ್ ಪ್ರಕರಣ | ಅಮಿತ್‌ ಶಾ ಕೋಪಕ್ಕೆ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ: ರಮೇಶ್‌ ಬಾಬು

ಪೆನ್‌ ಡ್ರೈವ್‌ ವಿಚಾರ ಕುಮಾರಸ್ವಾಮಿ ಮತ್ತು ಬಿಜೆಪಿಯ ಎಲ್ಲ ನಾಯಕರಿಗೆ ಮೊದಲೇ ತಿಳಿದಿತ್ತು. ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು ಎಂದು ಮಾಜಿ ಎಂಎಲ್‌ಸಿ ರಮೇಶ್‌ ಬಾಬು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, “ಕುಮಾರಸ್ವಾಮಿ ಅವರು ಅನವಶ್ಯಕವಾಗಿ ತಮ್ಮ ಕುಟುಂಬದ ಒಳ ಜಗಳವನ್ನು ಕಾಂಗ್ರೆಸ್‌ ಪಕ್ಷ, ಡಿ.ಕೆ.ಶಿವಕುಮಾರ್ , ಸಿಎಂ ಸಿದ್ದರಾಮಯ್ಯ ಅವರ ಮೇಲೆ ಹಾಕುತ್ತಿದ್ದಾರೆ” ಎಂದು ಕಿಡಿಕಾರಿದರು.

“ಬಿಜೆಪಿಗೆ ಜೆಡಿಎಸ್‌ ಮೇಲೆ ಇರುವ ಕೋಪವನ್ನು ಈ ರೀತಿಯಾಗಿ ತೀರಿಸಿಕೊಳ್ಳುವ ಕೆಲಸ ನಡೆದಿದೆ. ಹುಣಸೂರಿನಿಂದ ಪ್ರಜ್ವಲ್‌ ಅವರು ಸ್ಪರ್ಧಿಸಬೇಕು ಎನ್ನುವ ಚರ್ಚೆ ಬಂದಾಗ ನಮ್ಮ ಪಕ್ಷದಲ್ಲಿ ಸೂಟ್‌ ಕೇಸ್‌ ಸಂಸ್ಕೃತಿ ಇದೆ ಅದು ಹೋಗುವ ತನಕ ಇದೆಲ್ಲಾ ನಿಲ್ಲುವುದಿಲ್ಲ ಎಂದಿದ್ದರು. ಈ ಕಾರಣಕ್ಕೆ ರೇವಣ್ಣ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ಅಸಮಾಧಾನ ಹೊತ್ತಿಕೊಂಡಿತು” ಎಂದರು.

“ಭವಾನಿ ರೇವಣ್ಣ ಅವರು ಸಹ ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಅವರು ಅವಕಾಶ ಕೊಡಲಿಲ್ಲ. ಮತ್ತೆ ಭವಾನಿ ರೇವಣ್ಣ ಅವರು ಹಾಸನದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಎಂಥೆಂತಾ ಮಾತುಗಳನ್ನು ಆಡಿದರು. ಆರ್‌. ಆರ್ ನಗರದಿಂದಲೂ ಪ್ರಜ್ವಲ್‌ ಸ್ಪರ್ಧೆ ಮಾಡುತ್ತೇನೆ ಎಂದಾಗಲೂ ಅಸಮಾಧಾನ ಹೆಚ್ಚಾಗಿತ್ತು. ಇದು ಕುಟುಂಬಗಳ ಮಧ್ಯದ ಪೈಪೋಟಿ” ಎಂದು ವಿಶ್ಲೇಷಿಸಿದರು..

“ಕುಮಾರಸ್ವಾಮಿ ಅವರು ಪೆನ್‌ ಡ್ರೈವ್‌ ಹಂಚಿಕೆ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ಇದ್ದಾರೆ ಎನ್ನುವ ಹತಾಶೆಯ ಹೇಳಿಕೆ ಕೊಟ್ಟಿದ್ದಾರೆ. ಏಕೆಂದರೆ ಮಂಗಳವಾರ ಬೆಳಿಗ್ಗೆ ಅಮಿತ್‌ ಶಾ ಅವರು ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಹಾಗೂ ಯಡಿಯೂರಪ್ಪ ಅವರ ಜೊತೆ ಮಾತನಾಡಿದಾಗ, “ಈ ಘಟನೆಯಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗಿದೆ. ಈ ಪ್ರಕರಣವನ್ನು ನೀವೇಕೆ ಮೊದಲೇ ಸರಿ ಪಡಿಸಲಿಲ್ಲ” ಎಂದು ಪ್ರಶ್ನಿಸಿದ್ದಾರೆ. ಇದು ಕುಮಾರಸ್ವಾಮಿ ಕೋಪಕ್ಕೆ ಕಾರಣವಾಗಿದೆ” ಎಂದರು.

“2023 ಡಿಸೆಂಬರ್‌ 8 ರಂದು ದೇವರಾಜೇಗೌಡರು ಪ್ರಜ್ವಲ್‌ ರೇವಣ್ಣ ಅವರ ಸಿಡಿ ಇದೆ ಇದರ ಬಗ್ಗೆ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದರು. ಹಾಸನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ನನ್ನ ಬಳಿ ಸಿಡಿ ಇದೆ ಯಾವಾಗ ಬೇಕಾದರೂ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು. ಎಲ್ಲಾ ವಿಚಾರಗಳು ಗೊತ್ತಿದ್ದ ಬಿಜೆಪಿ ನಾಯಕರು ಏಕೆ ಈ ವಿಚಾರದಲ್ಲಿ ಮೌನವಾಗಿದ್ದಾರೆ” ಎಂದು ಪ್ರಶ್ನಿಸಿದರು.

“ಮಹಿಳೆಯರ ಜೀವದ ಪ್ರಶ್ನೆ ಇಲ್ಲಿದೆ. ಇದರಿಂದ ಸಾವಿರಾರು ಮಹಿಳೆಯರ ಘನತೆಗೆ ಪೆಟ್ಟಾಗಿದೆ. ಕುಮಾರಸ್ವಾಮಿ ಅವರೇ ಈ ಪ್ರಕರಣದ ಬಗ್ಗೆ ಪಶ್ಚಾತ್ತಾಪ ಪಡಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುತ್ತೇನೆ ಎಂದ ಹಾಸನ ಜಿಲ್ಲಾಧಿಕಾರಿ ಮಾತಿಗೂ ಕುಮಾರಸ್ವಾಮಿ ಹತಾಶೆಯಿಂದ ಉತ್ತರಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments