ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಅನ್ನು ಪೊಲೀಸರು ನ್ಯಾಯಾಲಕ್ಕೆ ಸಲ್ಲಿಸಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ವಿಚಾರಣಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಕೋರ್ಟ್ ಸೂಚಿಸಿದೆ. ಈ ನಡುವೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಬಾಲಕಿ ದಾಖಲಿಸಿದ್ದ ಹಳೇ ಕೇಸ್ ಬಗ್ಗೆ ವಿಚಾರಿಸುತ್ತಾ ಯಡಿಯೂರಪ್ಪ ಅವರು ರೂಮಿಗೆ ಕರೆದೊಯ್ದು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಉಲ್ಲೇಖಿಸಲಾಗಿದೆ.
ಬಾಲಕಿ ಪ್ರತಿಭಟಿಸಿದಾಗ ಹಣ ನೀಡಿ ಕಳುಹಿಸಿರುವುದಾಗಿ ಆರೋಪಿಸಲಾಗಿದೆ. ನಂತರ ಬಾಲಕಿಯ ತಾಯಿ ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಪೋಸ್ಟ್ ಆಗಿದ್ದ ವಿಡಿಯೋ ಡಿಲೀಟ್ ಮಾಡಿಸಲು ಮೂವರು ಪ್ರಯತ್ನಿಸಿದ್ದಾರೆ. ವೈ.ಎಂ. ಅರುಣ್, ಎಂ.ರುದ್ರೇಶ್, ಜಿ.ಮರಿಸ್ವಾಮಿ ಎನ್ನುವರು ಮಹಿಳೆಯನ್ನು ಕರೆತಂದು ವಿಡಿಯೋ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ನಾಲ್ವರ ವಿರುದ್ದವೂ ಪೊಲೀಸರು, ಆರೋಪಪಟ್ಟಿ ದಾಖಲಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಮಗಳ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮೂರು ತಿಂಗಳ ಹಿಂದೆ ದೂರು ನೀಡಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ನೋಟಿಸ್ ನೀಡಿದರು ಯಡಿಯೂರಪ್ಪ ತನಿಖೆಗೆ ಹಾಜರಾಗುತ್ತಿಲ್ಲವೆಂದು ಸಿಐಡಿ ಕೋರ್ಟ್ ಮೊರೆ ಹೋಗಿತ್ತು. ಬೆಂಗಳೂರು ವಿಶೇಷ ನ್ಯಾಯಾಲಯವು ಬಂಧನಕ್ಕೆ ವಾರೆಂಟ್ ಜಾರಿ ಮಾಡಲು ಆದೇಶಿಸಿತ್ತು. ಆದರೆ, ಹೈಕೋರ್ಟ್‌ನಲ್ಲಿ ಬಂಧನ ಮಾಡದಂತೆ ಬಿಎಸ್ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಂಧನ ಮಾಡದಂತೆ ಹಾಗೂ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.