Homeಕರ್ನಾಟಕಪ್ರಧಾನಿ ಮೋದಿ ಭೇಟಿಯಾದ ದೇವೇಗೌಡ ಕುಟುಂಬ; ಜನವರಿ ಅಂತ್ಯಕ್ಕೆ ಕ್ಷೇತ್ರ ಹಂಚಿಕೆ: ಕುಮಾರಸ್ವಾಮಿ

ಪ್ರಧಾನಿ ಮೋದಿ ಭೇಟಿಯಾದ ದೇವೇಗೌಡ ಕುಟುಂಬ; ಜನವರಿ ಅಂತ್ಯಕ್ಕೆ ಕ್ಷೇತ್ರ ಹಂಚಿಕೆ: ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಭೇಟಿ ಸಂಸತ್‌ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆಯಿತು.

ಗುರುವಾರ 11 ಗಂಟೆ ಹೊತ್ತಿಗೆ ಪ್ರಧಾನಿಗಳ ಕಾರ್ಯಾಲಯಕ್ಕೆ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು ಆಗಮಿಸಿದರು. ಇಬ್ಬರು ನಾಯಕರ ಜತೆ ಪ್ರಧಾನಿಗಳು ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, “ನಿಖಿಲ್ ಅವರು ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ” ಎಂದರು.

ಆದರೆ, “ಜನರು ಚುನಾವಣೆಗೆ ನಿಲ್ಲಿ ಎಂದು ಹೇಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ” ಎಂದು ತಿಳಿಸಿದರು.

ಜನವರಿ ಅಂತ್ಯದ ಹೊತ್ತಿಗೆ ಕ್ಷೇತ್ರ ಹಂಚಿಕೆ

“ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ. ಒಂದು ಕ್ಷೇತ್ರ ಹೆಚ್ಚೂ ಕಡಿಮೆ ಆಗಬಹುದು ಅಷ್ಟೇ. ಮುಖ್ಯವಾಗಿ ಪರಸ್ಪರ ವಿಶ್ವಾಸ ಬೇಕು ಅಷ್ಟೇ. ಜನವರಿ ಅಂತ್ಯದ ಒಳಗೆ ನಾವು ಎಲ್ಲ ನಿರ್ಧಾರ ಮಾಡುತ್ತೇವೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಎಂದ ಹೆಚ್‌ಡಿಕೆ

ತಮ್ಮ ಸ್ಪರ್ಧೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು; “ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನ ಮುಂದೆ ಇಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬರುತ್ತಿದೆ. ಅದು ನಮ್ಮ ಜನರು, ಕಾರ್ಯಕರ್ತರು ಹಾಗೆ ಭಾವನೆ ಮಾಡುವುದಕ್ಕೆ ಕಾರಣವಾಗಿದೆ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ. ನಾನು ಇಲ್ಲಿಯೇ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವುದು ಅನೇಕ ಜನರ ಅಭಿಪ್ರಾಯ, ನನ್ನ ಅಭಿಪ್ರಾಯವೂ ಅದೇ ಆಗಿದೆ. ನಾನು ಕರ್ನಾಟಕದಲ್ಲೇ ಇರಲು ತೀರ್ಮಾನ ಮಾಡಿದ್ದೇನೆ” ಎಂದರು.

ಕುಮಾರಸ್ವಾಮಿ ಅವರು ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕುಮಾರಸ್ವಾಮಿ, “ಯಾರ ಹಣೆಯ ಮೇಲೆ ಏನ್ ಬರೆದಿದೆಯೋ ಅಂತ ಗೊತ್ತಿಲ್ಲಾ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ, ಮುಂದೆ ಏನೇನು ನಡೆಯುತ್ತೋ?” ಎಂದು ಹೇಳಿದರು.

ಕಾಂಗ್ರೆಸ್‌ ನಡೆ ಬಗ್ಗೆ ಟೀಕೆ

“ಸಂಸತ್ ಭವನದಲ್ಲಿ ಯುವಕರು ಹೊಗೆ ಬಿಟ್ಟ ಪ್ರಕರಣವನ್ನೇ ದೊಡ್ಡದು ಮಾಡಿ ಕಾಂಗ್ರೆಸ್‌ ಪಕ್ಷ ಸಂಸತ್‌ ಕಲಾಪವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ವಿಪಕ್ಷಗಳ ನಡೆ ಸರಿ ಇಲ್ಲ. ಖರ್ಗೆ, ಸಿದ್ದರಾಮಯ್ಯ ಅವರಿಗೆ ನಾನು ಕೇಳಬಯಸುತ್ತೇನೆ, ಸಂಸತ್‌ ಘಟನೆಯನ್ನೇ ಭದ್ರತಾ ವೈಫಲ್ಯ ಅನ್ನುವುದಾದರೆ ವಿಧಾನಸಭೆಯ ಅಧಿವೇಶನದ ವೇಳೆ ಒಬ್ಬ ವ್ಯಕ್ತಿ ಸದನದ ಒಳಕ್ಕೆ ಬಂದು ಒಂದೂವರೆ ಗಂಟೆ ಕಲಾಪದಲ್ಲಿ ಭಾಗಿಯಾಗಿದ್ದ. ಅದನ್ನು ಏನೆಂದು ಕರೆಯಬೇಕು” ಎಂದು ಪ್ರಶ್ನಿಸಿದರು.

“ವಿಧಾನಸಭೆಯ ಕಳೆದ ಕಲಾಪದಲ್ಲಿ ಸಭಾಧ್ಯಕ್ಷರ ಮೇಲೆ ಪೇಪರ್ ಎಸೆದರು ಎಂದು ವಿಪಕ್ಷಗಳ ಶಾಸಕರನ್ನು ಸದನದಿಂದ ಹೊರ ಹಾಕಿದ್ದರು. ಅದನ್ನು ಏನೆಂದು ಕರೆಯುತ್ತಾರೆ? ಅದು ಯಾವ ರಾಜಕೀಯ? ಒಬ್ಬ ದಲಿತ ಉಪಾಧ್ಯಕ್ಷರು ಅಂಥ ಹೇಳಿ ಶಾಸಕರನ್ನು ಸದನದಿಂದ ಹೊರ ಹಾಕಿದ್ದರು ಕರ್ನಾಟಕದಲ್ಲಿ. ಇದರ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಖರ್ಗೆಯವರೇ” ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿ ಎನ್ ಬಾಲಕೃಷ್ಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments