Homeಕರ್ನಾಟಕವಕ್ಫ್ ನೆಪದಲ್ಲಿ ವಿಜಯಪುರವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುವ ಸಂಚು: ಸಚಿವ ಎಂ ಬಿ ಪಾಟೀಲ್ ಕಿಡಿ

ವಕ್ಫ್ ನೆಪದಲ್ಲಿ ವಿಜಯಪುರವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುವ ಸಂಚು: ಸಚಿವ ಎಂ ಬಿ ಪಾಟೀಲ್ ಕಿಡಿ

ಕಳೆದ ಹತ್ತು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ವಕ್ಫ್ ಆಸ್ತಿ ರಕ್ಷಣೆ ಕುರಿತು ಅಪಾರ ಕಾಳಜಿ ತೋರಿದ ಬಿಜೆಪಿ ಈಗ ವಿಜಯಪುರವನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ.

ಶುಕ್ರವಾರ ಅವರು ವಿಜಯಪುರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿ, ಬಿಜೆಪಿ ಅಧಿಕಾರದ ಅವಧಿಯಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಹೊರಡಿಸಿದ ಹತ್ತಾರು ಸುತ್ತೋಲೆಗಳನ್ನು ಬಿಡುಗಡೆ ಮಾಡಿದರು.

“ಕಳೆದ ಒಂದೆರಡು ವಾರಗಳಿಂದ ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ.
ಆದರೆ, ತಾವೇ ಅಧಿಕಾರದಲ್ಲಿ ಇದ್ದಾಗ ರೈತರು, ಧಾರ್ಮಿಕ ಸ್ಥಳಗಳ ಹಾಗೂ ಎಲ್ಲ ಧರ್ಮೀಯರ ಆಸ್ತಿಯನ್ನು ವಕ್ಫ್‌ಗೆ ಹಿಂಪಡೆದಿದೆ” ಎಂದು ದೂರಿದರು.

“ರಾಜ್ಯದಲ್ಲಿ 2019ರಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಆ ವರ್ಷದ ಸೆ.17ರಂದು ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮದ ಮುರುಘೇಂದ್ರ ಶಿವಬಸಪ್ಪ ಖ್ಯಾಡಿ, ಮಾಶಾಬಿ ಮೌಲಾಸಾಬ ಮುಲ್ಲಾ, ಸುಭಾಷ ಧರ್ಮಣ್ಣ ಆನೆಗುಂದಿ ಅವರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಇಂದೀಕರಣ ಮಾಡಿದೆ. ಇಂಡಿ ತಾ.ನಲ್ಲೂ 2023ರ ಜ.13ರಂದು ಮಾರ್ಸನಹಳ್ಳಿಯ ಗ್ರಾಮದ ನಿಂಗಪ್ಪ ಭೂಮಣ್ಣ ಶಿರಶ್ಯಾಡ ಅವರಿಗೆ ಸೇರಿದ ಆಸ್ತಿಯನ್ನು ಇದೇ ರೀತಿ ವಕ್ಫ್ ಹೆಸರಿಗೆ ಮಾಡಲಾಗಿದೆ” ಎಂದು ವಿವರಿಸಿದರು.

“2010ರ ಜ.4ರಂದು ಬಿಜೆಪಿ ಸರಕಾರವಿದ್ದಾಗ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕ್ರಮಗೊಳಿಸಬೇಕೆಂದು ಕಂದಾಯ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗಿತ್ತು. ಬಳಿಕ ಅದೇ ವರ್ಷದ ಮೇ 29ರಂದು ವಕ್ಫ್ ಆಸ್ತಿಗಳ ಅತಿಕ್ರಮಣ ತೆರವಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು” ಎಂದು ಹೇಳಿದರು.

“ಇದಾದಮೇಲೂ 2011ರಲ್ಲಿ ಒಮ್ಮೆ ಕಲಬುರಗಿಯ ಪ್ರಾದೇಶಿಕ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ದಾಖಲೆಗಳನ್ನು ಕ್ರಮಬದ್ಧಗೊಳಿಸುವ ಕುರಿತು, 2011ರ ಏ.23 ರಂದು ವಕ್ಫ್ ಭೂಸ್ವಾಧೀನ ಪರಿಹಾರವನ್ನು ವಕ್ಫ್ ಮಂಡಳಿಯ ಲೆಕ್ಕ ಶೀರ್ಷಿಕೆಗೆ ಕಡ್ಡಾಯವಾಗಿ ಪಾವತಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು” ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

“ಬಿಜೆಪಿ ತನ್ನ ಎರಡನೆಯ ಅವಧಿಯ ಸರಕಾರ ಇದ್ದಾಗಲೂ ಹೀಗೆಯೇ ಮಾಡಿದೆ. 2020ರ ಆ.8 ರಂದು ವಕ್ಫ್ ಆಸ್ತಿಗಳನ್ನು ಭೂಮಿ ತಂತ್ರಾಶದಲ್ಲಿ ಫ್ಲಾಗ್ ಮಾಡುವ ಕುರಿತು ಕಂದಾಯ ಇಲಾಖೆಯ ಅಂದಿನ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು. ಪುನಃ 2021ರ ಜ.8 ರಂದು ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ ರಚಿಸಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಿತ್ತು. ಆಮೇಲೆ ಸಹ 2021ರ ಜ.27ರಂದು ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಫ್ಲಾಗ್ (ಲಾಕ್) ಮಾಡುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರ ಸುತ್ತೋಲೆ ಹೊರಬಿದ್ದಿತ್ತು” ಎಂದು ಸಚಿವರು ವಿವರಿಸಿದರು.

“2014ರ ತನ್ನ ಪ್ರಣಾಳಿಕೆಯಲ್ಲೂ ಬಿಜೆಪಿ ವಕ್ಫ್ ಮಂಡಳಿಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರ ಜೊತೆ ಸಮಾಲೋಚಿಸಿ, ಅತೀಕ್ರಮಣ ತೆರವುಗೊಳಿಸುವುದಾಗಿ ಹೇಳಿತ್ತು. ಈಗ ಅದು ಬೂಟಾಟಿಕೆ ಮಾಡುತ್ತಿದೆ. 2019ರಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಾಗಲೂ ಮೋದಿ ಸರಕಾರವು ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಕ್ಕೆ ಆದ್ಯತೆ ಕೊಡಲಾಗಿದೆ ಎಂದು ಹೇಳಿತ್ತು. ರಾಜ್ಯದಲ್ಲಿ ಈಗ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ವಾಪಸ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಯ್ಯ ಆದೇಶಿಸಿದ್ದಾರೆ” ಎಂದು ಸಚಿವರು ಪ್ರತಿಪಾದಿಸಿದರು.

“ನಾನು, ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ವಕ್ಫ್ ಸಚಿವ ಜಮೀರ ಅಹ್ಮದ್ ಖಾನ್ ಕೂಡ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇವೆ. 2023ರ ಜೂನ್ 1ರಿಂದ 2024ರ ಅ.31ರವರೆಗೆ ರಾಜ್ಯದಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮತ್ತು ತಪ್ಪು ಸರಿಪಡಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕ ಬಹಿರಂಗ ಪಡಿಸಿದ್ದೇವೆ” ಎಂದು ತಿಳಿಸಿದರು.

“ಈ ವಿಚಾರಗಳು ಗೊತ್ತಿಲ್ಲದ ಸ್ವಾಮೀಜಿಗಳು ಬಿಜೆಪಿಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಸ್ವಾಮೀಜಿಗಳಿಗೆ ಈ ದಾಖಲೆಗಳನ್ನು ತಲುಪಿಸುತ್ತೇವೆ. ಆಗ ಸ್ವಾಮೀಜಿಗಳಿಗೆ ಪ್ರಧಾನಿ ಮತ್ತು ಬಿಜೆಪಿ ಮುಖಂಡರ ನಿಜಬಣ್ಣ ತಿಳಿಯಲಿದೆ. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರ ವಿಜಯಪುರ ಭೇಟಿ ಕಾನೂನುಬಾಹಿರ. ಇದರ ಜತೆಗೆ ಯತ್ನಾಳ ಮತ್ತು ಕರಂದ್ಲಾಜೆ ಹೋರಾಟ ಕೆಲವೇ ಗಂಟೆಗಳಲ್ಲಿ ಮುಗಿದಿದೆ” ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲ್‌ ಹಮೀದ್ ಮುಷರಫ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments