Homeಕರ್ನಾಟಕಹೊರಗಿನಿಂದ ಬಂದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಆದ್ಯತೆ: ಡಿ ಕೆ ಸುರೇಶ್ ಮಾರ್ಮಿಕ ಹೇಳಿಕೆ

ಹೊರಗಿನಿಂದ ಬಂದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಆದ್ಯತೆ: ಡಿ ಕೆ ಸುರೇಶ್ ಮಾರ್ಮಿಕ ಹೇಳಿಕೆ

  • ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಗುರಿ
  • ಯತೀಂದ್ರ ಅವರ ಮಾತೇ ನಮಗೆ ವೇದವಾಕ್ಯ
  • ಶಾಸಕರ ಪ್ರವಾಸಕ್ಕೂ ಶಿವಕುಮಾರ್‌ಗೂ ಸಂಬಂಧವಿಲ್ಲ

ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್ ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಮೊದಲ ಆದ್ಯತೆ ಅವರಿಗೆ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಮಾರ್ಮಿಕವಾಗಿ ಮಾತನಾಡಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ರಾಜ್ಯ ಸರ್ಕಾರ ಬಿಜೆಪಿ ಮುಖಂಡನಿಗೆ ಸಚಿವ ಸ್ಥಾನಮಾನ ನೀಡಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಎಲ್ಲರನ್ನು ಗೌರವಿಸುತ್ತದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗಳಿಗೆ ಇರುವುದರಿಂದ ಮಾಡಿರಬಹುದು. ಇದರಲ್ಲಿ ತಪ್ಪೇನಿಲ್ಲ” ಎಂದರು.

ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ

ನಿಮ್ಮ ಸಹೋದರ ಅವರು ದೆಹಲಿಯಲ್ಲಿದ್ದಾರೆ ಎಂದು ಕೇಳಿದಾಗ, “ಅವರು ದೆಹಲಿ ಪ್ರವಾಸಕ್ಕೆ ಹೋಗುವಾಗ ಚುನಾವಣೆ ವಿಚಾರವಾಗಿ ಸಭೆ ಮಾಡಲು ಕರೆದಿದ್ದಾರೆ ಎಂದು ನಿಮಗೆ ಮಾಹಿತಿ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆದಾಗ ಮಾತ್ರ ದೆಹಲಿಗೆ ಹೋಗುತ್ತಿಲ್ಲ. ಕಳೆದ 40 ವರ್ಷಗಳಿಂದ ನಿರಂತರವಾಗಿ ದೆಹಲಿಗೆ ಹೋಗುತ್ತಿದ್ದಾರೆ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೋಗುತ್ತಾರೆ. ಈಗ ಅವರು ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದ ಕೆಲಸಗಳು ಇರುತ್ತವೆ. ಇನ್ನು ದೆಹಲಿಗೆ ಹೋದಾಗ, ರಾಜಕೀಯವಾಗಿ ಅಲ್ಲದಿದ್ದರೂ ಕುಶಲೋಪರಿ ಚರ್ಚೆಗೆ ಭೇಟಿ ಮಾಡುತ್ತಾರೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗ ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಮಾಡಲು ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರಿನ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಹೀಗಾಗಿ ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ” ಎಂದು ತಿಳಿಸಿದರು.

ಯತೀಂದ್ರ ಅವರ ಮಾತೇ ನಮಗೆ ವೇದವಾಕ್ಯ

ಯತೀಂದ್ರ ಸಿದ್ದಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಡಿಸಿಎಂ ಅವರು ಈಗಾಗಲೇ ಹೇಳಿದ್ದಾರೆ. ಅವರಷ್ಟು ತಿಳುವಳಿಕೆ ಇಲ್ಲ. ಅವರಷ್ಟು ದೊಡ್ಡವರು ನಾವಲ್ಲ. ಅವರು ಏನು ಹೇಳುತ್ತಾರೋ ಅದೇ ವೇದವಾಕ್ಯ” ಎಂದು ತಿಳಿಸಿದರು.

ನಮಗೆ ಸಿಗುವ ನೋಟಿಸ್ ಯತೀಂದ್ರ ಅವರಿಗೆ ಏಕಿಲ್ಲ ಎಂಬ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು. ಅವರೇ ಹೈಕಮಾಂಡ್ ಆಗಿರುವುದರಿಂದ ಏನೂ ಸಮಸ್ಯೆ ಇಲ್ಲ” ಎಂದರು.

ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ

ಕೆಎಂಎಫ್ ಚುನಾವಣೆಯಲ್ಲಿ ನಿಮ್ಮ ಜೊತೆಗೆ ಇನ್ನಿಬ್ಬರು ಶಾಸಕರು ಸ್ಪರ್ಧಿಸಲು ಆಕಾಂಕ್ಷಿಗಳಿದ್ದಾರೆ ಎಂದು ಕೇಳಿದಾಗ, “ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಹಾಗೂ ಸರ್ಕಾರದ ತೀರ್ಮಾನದಂತೆ ಆಗುತ್ತದೆ. ಇದರಲ್ಲಿ ಲಾಭಿ ಮಾಡಿ ಗಿಟ್ಟಿಸಿಕೊಳ್ಳುವಂತಹದ್ದು ಏನೂ ಇಲ್ಲ. ಇದು ರಾಜ್ಯದ ರೈತರ ಜವಾಬ್ದಾರಿಯುತ ಸಂಸ್ಥೆ. ರೈತರ ಹಿತ ಕಾಯುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಹಾಗೂ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ನಾನು ಯಾರಿಗೂ ಈ ಜವಾಬ್ದಾರಿ ಬೇಕು ಎಂದು ಕೇಳುವುದಿಲ್ಲ, ಅದರ ಅಗತ್ಯವಿಲ್ಲ. ಸಂಸದನಾಗಿ ನಾನು ಕೆಲಸ ಮಾಡಿದ್ದೇನೆ, ನನಗೆ ನನ್ನದೇ ಆದ ಜವಾಬ್ದಾರಿ ಇತಿ ಮಿತಿಗಳಿವೆ. ನಾನು ಯಾವುದನ್ನು ಆಸೆಪಟ್ಟು ಕೇಳುವುದಿಲ್ಲ, ಅದರ ಹಿಂದೆ ಹೋಗುವವನೂ ಅಲ್ಲ” ಎಂದರು.

ನಿಮಗೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೀರಾ, ಆಸೆ, ಆಕಾಂಕ್ಷೆ ಇದೆಯೇ ಎಂದು ಕೇಳಿದಾಗ, “ನನಗೆ ಯಾವ ಆಸೆ, ಆಕಾಂಕ್ಷೆ ಇಲ್ಲ. ಇರುವ ಜವಾಬ್ದಾರಿ ನಿಭಾಯಿಸುವುದೇ ಕಷ್ಟ. ನನಗೆ ಈಗಾಗಲೇ ಅನೇಕ ಜವಾಬ್ದಾರಿಗಳಿವೆ. ನನಗೆ ವಿಶ್ರಾಂತಿ ಬೇಕು ಎಂದು ಕೇಳಿದವನು ನಾನು. ಜವಾಬ್ದಾರಿ ಬಂದಾಗ ಅದನ್ನು ನಿಭಾಯಿಸುವ ದೃಷ್ಟಿಕೋನ ಬಹಳ ಮುಖ್ಯ. ರೈತರ ಹಿತ, ನಂದಿನ ಬ್ರ್ಯಾಂಡ್ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಯಾವುದೋ ಖುಷಿಗಾಗಿ ಹೋಗಿ ಕೂರುವ ಸ್ಥಾನ ಅದಲ್ಲ” ಎಂದು ತಿಳಿಸಿದರು.

ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, “ದೆಹಲಿಯಲ್ಲಿ ಡೈರಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ನಡೆಯುತ್ತಿದ್ದು, ಅಧಿಕಾರಿಗಳು ಆಡಳಿತ ಮಂಡಳಿ ಸೇರಿ 20 ಜನರನ್ನು ಕರೆದುಕೊಂಡು ಹೋಗುತ್ತಿದ್ದೇನೆ. ರಾಜ್ಯದ ನಂದಿನಿಯನ್ನು ಭವಿಷ್ಯದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಹೋಗುತ್ತಿದ್ದೇವೆ” ಎಂದರು.

ಶಾಸಕರ ಪ್ರವಾಸಕ್ಕೂ ಶಿವಕುಮಾರ್ ಅವರಿಗೂ ಸಂಬಂಧವಿಲ್ಲ

ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್‌ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ, “ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರವಾಗಿ ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಶಾಸಕರ ಪ್ರವಾಸ ವೈಯಕ್ತಿಕವಾಗಿಯೂ ಇರಬಹುದು, ಬೇರೆಯವರ ಪ್ರಯೋಜಕತ್ವವೂ ಇರಬಹುದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ. ಈ ರೀತಿ ಏನಾದರೂ ಹುಟ್ಟಾಕುತ್ತಿದ್ದರೆ, ಅದು ರಾಜಕೀಯ ದುರುದ್ದೇಶದಿಂದ ಮಾತ್ರ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ನಮ್ಮ ಪಕ್ಷದ ಕೆಲವರು ಮಾಡುತ್ತಿರಬಹುದು. ನಮ್ಮ ಪಕ್ಷದವರು ಮಾಡುತ್ತಿದ್ದಾರೋ, ವಿರೋಧ ಪಕ್ಷದವರು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದರಲ್ಲಿ ಶಿವಕುಮಾರ್ ಅವರು ಪಾಲುದಾರರಲ್ಲ” ಎಂದು ಸ್ಪಷ್ಟಪಡಿಸಿದರು.

ಜಿಬಿಎ ಚುನಾವಣೆ ಮತ್ತೆ ಮುಂದಕ್ಕೆ ಹೋಗುವ ಚರ್ಚೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಮ್ಮ ಕ್ಷೇತ್ರಗಳಲ್ಲಿ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಫಲಿತಾಂಶ ಒಳ್ಳೆಯದಾಗುತ್ತದೆಯೋ, ಕೆಟ್ಟದಾಗುತ್ತದೋ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡಲೇ ಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದರು.

ನಾನು ಹಾಗೂ ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ, ಹೈಕಮಾಂಡ್ ನಾಯಕರ ಮುಂದೆ ಮಾತನಾಡುತ್ತಿದ್ದೇವೆ ಎಂಬ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೇಳಿರುವುದು ಶಿವಕುಮಾರ್ ಅವರು, ನನ್ನನ್ನು ಕೇಳಿದರೆ, ನಾನು ಏನು ಹೇಳಲಿ” ಎಂದರು.

ಸಿಎಂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ನೀವು ಹೇಳಿದ್ದಿರಿ ಎಂದು ಕೇಳಿದಾಗ, “ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಇವತ್ತಿಗೂ ನನಗೆ ಭರವಸೆ ಇದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments